ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಅಂತಿಮ ಕ್ಷಣದಲ್ಲಿ ಒತ್ತಡದಲ್ಲಿ ಕೂಲ್ ಆಗಿ ಆಡಿದ ಹಾರ್ದಿಕ್ ಪಾಂಡ್ಯ ಸಿಕ್ಸರ್ ಮೂಲಕ ಭಾರತಕ್ಕೆ 19.4 ಓವರ್ ಗಳಲ್ಲಿ ಗೆಲುವು ಕೊಡಿಸಿದರು. ಪಾಂಡ್ಯ 22 ಎಸೆತಗಳಲ್ಲಿ 42 ರನ್ ಚಚ್ಚಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾ ನೀಡಿದ 195 ರನ್ ಗಳ ಬೃಹತ್ ಮೊತ್ತ ಗುರಿ ಬೆನ್ನತ್ತಿದ ಭಾರತ ಆರಂಭ ಉತ್ತಮವಾಗಿತ್ತು. ಕೆಎಲ್ ರಾಹುಲ್ 22 ಎಸೆತಗಳಲ್ಲಿ 30, ಶಿಖರ್ ಧವನ್ 36 ಎಸೆತಗಳಲ್ಲಿ 52 ರನ್ ಗಳಿಸಿ ಉತ್ತಮ ಬುನಾದಿ ಹಾಕಿಕೊಟ್ಟರು. ಬಳಿಕ ನಾಯಕ ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 40 ರನ್ ಸಿಡಿಸಿ ಔಟಾದರು. ಕೊಹ್ಲಿ ಔಟಾದ ಬಳಿಕ ಭಾರತಕ್ಕೆ ಸೋಲಿನ ಭಯ ಆವರಿಸಿತ್ತು. ಈ ಸಂದರ್ಭದಲ್ಲಿ ಏಕಾಂಗಿಯಾಗಿ ಹೋರಾಡಿದ ಹಾರ್ದಿಕ್ ಪಾಂಡ್ಯ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮ ಓವರ್ ನಲ್ಲಿ 12 ಎಸೆತಗಳಿಂದ 25 ರನ್ ಅಗತ್ಯವಿತ್ತು. ಆದರೆ ತಮ್ಮಲ್ಲೇ ಸ್ಟ್ರೈಕ್ ಇಟ್ಟುಕೊಂಡ ಹಾರ್ದಿಕ್ ನಿಯಮಿತವಾಗಿ ಬೌಂಡರಿ ಮತ್ತು ಸಿಕ್ಸರ್ ಗಳ ಮೂಲಕ ರನ್ ರೇಟ್ ಕಾಯ್ದುಕೊಂಡರು. ಅಂತಿಮವಾಗಿ ಭಾರತ 19.4 ಓವರ್ ಗಳಲ್ಲಿ 195 ರನ್ ಗಳಿಸಿ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿತು.