ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 50 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಈ ಪಂದ್ಯ ಸಂಪೂರ್ಣವಾಗಿ ಹಾರ್ದಿಕ್ ಪಾಂಡ್ಯ ಶೋ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ರೋಹಿತ್ ಶರ್ಮಾ 24, ದೀಪಕ್ ಹೂಡಾ 33, ಸೂರ್ಯಕುಮಾರ್ ಯಾದವ್ 39 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ ಬಿರುಸಿನ 51 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಭುವನೇಶ್ವರ್ ಕುಮಾರ್ ಆರಂಭದಲ್ಲೇ ಆಘಾತವಿಕ್ಕಿದರು. ಇನ್ ಫಾರ್ಮ್ ಬ್ಯಾಟಿಗ ಜೋಸ್ ಬಟ್ಲರ್ ರನ್ನು ಶೂನ್ಯಕ್ಕೆ ಔಟ್ ಮಾಡಿದರು. ಬಳಿಕ ಜೇಸನ್ ರಾಯ್ ಕೂಡಾ 4 ರನ್ ಗೆ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಈ ನಡುವೆ ಡೇವಿಡ್ ಮಲನ್ 24, ಹ್ಯಾರಿ ಬ್ರೂಕ್ 28 ಮೊಯಿನ್ ಅಲಿ 36 ಮತ್ತು ಕ್ರಿಸ್ ಜೋರ್ಡನ್ ಅಜೇಯ 26 ರನ್ ಗಳಿಸಿದರು. ಆದರೆ ಕಾಲ ಕಾಲಕ್ಕೆ ಟೀಂ ಇಂಡಿಯಾ ವಿಕೆಟ್ ಕೀಳಲು ಸಾಧ‍್ಯವಾಗಿದ್ದರಿಂದ ಇಂಗ್ಲೆಂಡ್ ಇನಿಂಗ್ಸ್ 19.3 ಓವರ್ ಗಳಲ್ಲಿ 148 ರನ್ ಗಳಿಗೆ ಕೊನೆಯಾಯಿತು. ಬೌಲಿಂಗ್ ನಲ್ಲೂ ಮಿಂಚಿದ ಹಾರ್ದಿಕ್ ಪಾಂಡ್ಯ 4 ವಿಕೆಟ್ ಕಬಳಿಸಿದರು. ಉಳಿದಂತೆ ಅರ್ಷ್ ದೀಪ್ ಸಿಂಗ್ ಮತ್ತು ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಹಾಗೂ ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.