ಬೆಂಗಳೂರು: ತವರು ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಿಣುಕಾಡಿ 37 ರನ್ ಗಳಿಸಿದರೂ ತಂಡಕ್ಕೆ ಆಸರೆಯಾದರು.
ಭಾರತ ಬಿ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಎ ತಂಡದ ಪರವಾಗಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ ತಂಡ ಸಂಕಷ್ಟದಲ್ಲಿದ್ದಾಗ ತಾಳ್ಮೆಯ ಆಟವಾಡಿದರು. ಆದರೆ ಒಟ್ಟು 111 ಎಸೆತ ಎದುರಿಸಿದ ಅವರು 37 ರನ್ ಗಳಿಸಿ ಔಟಾಗಿ ನಿರಾಸೆ ಅನುಭವಿಸಿದರು.
ತವರಿನಲ್ಲಿ ನಡೆಯುತ್ತಿರುವ ಪಂದ್ಯವೆಂಬ ಕಾರಣಕ್ಕೆ ಕೆಎಲ್ ರಾಹುಲ್ ಗೆ ಚಿಯರ್ ಮಾಡಲು ಅವರ ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು. ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ನಿಟ್ಟಿನಲ್ಲಿ ಕೆಎಲ್ ರಾಹುಲ್ ಗೆ ಈ ಪಂದ್ಯ ಮುಖ್ಯವಾಗಿದೆ. ಮುಂಬರುವ ಟೆಸ್ಟ್ ಸರಣಿಗೆ ಆಯ್ಕೆಯಾಗಲು ಇದೇ ದುಲೀಪ್ ಟ್ರೋಫಿ ಮಾನದಂಡವಾಗಲಿದೆ.
ಆದರೆ ತಿಣುಕಾಡಿ 37 ರನ್ ಗಳಿಸಿದ ಅವರು ವಾಷಿಂಘ್ಟನ್ ಸುಂದರ್ ಎಸೆತದಲ್ಲಿ ಸ್ವೀಪ್ ಮಾಡಲು ಹೋಗಿ ಬೌಲ್ಡ್ ಔಟ್ ಆದರು. ಭಾರತ ಬಿ ತಂಡ ಮೊದಲ ಇನಿಂಗ್ಸ್ ನಲ್ಲಿ 321 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿರುವ ಭಾರತ ಎ ತಂಡ ಇತ್ತೀಚೆಗಿನ ವರದಿ ಬಂದಾಗ 7 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಮುನ್ನಡೆ ಪಡೆಯಲು ಹೆಣಗಾಡುತ್ತಿದೆ. ಭಾರತ ಎ ತಂಡಕ್ಕೆ ಶುಬ್ಮನ್ ಗಿಲ್ ನಾಯಕರಾಗಿದ್ದರೆ ಕನ್ನಡಿಗ ಮಯಾಂಕ್ ಅಗರ್ವಾಲ್, ಧ್ರುವ್ ಜ್ಯುರೆಲ್, ರಿಯಾನ್ ಪರಾಗ್, ಶಿವಂ ದುಬೆ, ಕುಲದೀಪ್ ಯಾದವ್ ಮೊದಲಾದ ಆಟಗಾರರು ಆಡುತ್ತಿದ್ದಾರೆ. ಬಿ ತಂಡದ ಪರ ಅಭಿಮನ್ಯು ಈಶ್ವರನ್ ನಾಯಕರಾಗಿದ್ದರೆ ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ಸರ್ಫರಾಜ್ ಖಾನ್ ಮೊದಲಾದ ಆಟಗಾರರು ಆಡುತ್ತಿದ್ದಾರೆ.