Publish Date: Mon, 20 Sep 2021 (11:31 IST)
Updated Date: Mon, 20 Sep 2021 (09:33 IST)
ಮುಂಬೈ: ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗುವುದು ಬಹುತೇಕ ಖಚಿತವಾಗಿದೆ.
ಆದರೆ ರೋಹಿತ್ ನಾಯಕರಾದರೆ ಉಪನಾಯಕನಾರು ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ರೋಹಿತ್ ಗೆ 34 ವರ್ಷ ವಯಸ್ಸಾಗಿದ್ದು, ಇನ್ನು ಹೆಚ್ಚೆಂದರೆ ಎರಡು ವರ್ಷ ನಾಯಕರಾಗಬಹುದು. ಆದರೆ ಅದಾದ ಬಳಿಕ ಟೀಂ ಇಂಡಿಯಾಗೆ ಹೊಸ ನಾಯಕನನ್ನು ಹುಟ್ಟುಹಾಕುವುದು ಅನಿವಾರ್ಯವಾಗಿದೆ.
ಆ ದೃಷ್ಟಿಯಿಂದ ಬಿಸಿಸಿಐ ಈಗ ಭವಿಷ್ಯದ ದೃಷ್ಟಿಯಿಂದ ನಾಯಕತ್ವದ ಸಾಮರ್ಥ್ಯವುಳ್ಳ ಆಟಗಾರನನ್ನು ಉಪನಾಯಕನಾಗಿ ನಿಯುಕ್ತಿಗೊಳಿಸಬಹುದು. ಈ ನಿಟ್ಟಿನಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಹೆಸರು ಮುಂಚೂಣಿಯಲ್ಲಿದೆ. ಈ ಇಬ್ಬರೂ ಕ್ರಿಕೆಟಿಗರು ಮೂರೂ ಮಾದರಿಯಲ್ಲಿ ಆಡುವ ಖಾಯಂ ಸದಸ್ಯರು. ಹೀಗಾಗಿ ಈ ಇಬ್ಬರಲ್ಲಿ ಒಬ್ಬರನ್ನು ಅಥವಾ ಸ್ಪ್ಲಿಟ್ ಕ್ಯಾಪ್ಟನ್ಸಿ ಮಾಡಿ ಟೆಸ್ಟ್ ತಂಡಕ್ಕೆ ಒಬ್ಬರು, ಸೀಮಿತ ಓವರ್ ಗೆ ಒಬ್ಬರನ್ನು ನಾಯಕರಾಗಿ ಬೆಳೆಸುವ ಉದ್ದೇಶದಿಂದ ಉಪನಾಯಕನ ಹುದ್ದೆಗೆ ಸೂಕ್ತರಾದವರನ್ನೇ ಬಿಸಿಸಿಐ ಆಯ್ಕೆ ಮಾಡಬಹುದು.