Publish Date: Fri, 10 Nov 2023 (08:45 IST)
Updated Date: Fri, 10 Nov 2023 (08:48 IST)
ಅಹಮ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ದ.ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ದ.ಆಫ್ರಿಕಾ ಈಗಾಗಲೇ ಸೆಮಿಫೈನಲ್ ನಲ್ಲಿ ಸ್ಥಾನ ಖಚಿತಪಡಿಸಿದೆ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶ ಆಫ್ರಿಕಾ ಮೇಲೆ ಹೆಚ್ಚಿನ ಪರಿಣಾಮ ಬೀರದು. ಹಾಗಿದ್ದರೂ ಇದಕ್ಕೆ ಮೊದಲು ಟೀಂ ಇಂಡಿಯಾ ವಿರುದ್ಧ ಹೀನಾಯವಾಗಿ ಸೋತಿದ್ದ ಆಫ್ರಿಕಾಗೆ ಈಗ ಮತ್ತೆ ಗೆಲುವಿನ ಹಳಿಗೆ ಬರಲು ಉತ್ತಮ ಅವಕಾಶ ಸಿಕ್ಕಂತಾಗಲಿದೆ.
ಅಫ್ಘಾನಿಸ್ತಾನ ಈ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಾ ಬಂದಿದೆ. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಹೊಸ್ತಿಲವರೆಗೆ ಬಂದು ಗ್ಲೆನ್ ಮ್ಯಾಕ್ಸ್ ವೆಲ್ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಸೋಲು ಕಂಡಿತ್ತು. ಹೀಗಾಗಿ ದೈತ್ಯರ ಮುಂದೆಯೂ ನಿರ್ಭಯ ಕ್ರಿಕೆಟ್ ಆಡುವ ತಾಕತ್ತು ಇದೆ ಎಂದು ಈಗಾಗಲೇ ತೋರಿಸಿಕೊಟ್ಟಿದೆ. ಹೀಗಾಗಿ ಆಫ್ರಿಕಾಗೆ ಸುಲಭ ತುತ್ತಂತೂ ಆಗಲಾರದು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.