ಧರ್ಮಶಾಲಾ: ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಸೋಲೇ ಇಲ್ಲದೆ ಮೆರೆಯುತ್ತಿದ್ದ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 4 ವಿಕೆಟ್ ಗಳ ರೋಚಕ ಗೆಲುವು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 273 ರನ್ ಗಳಿಗೆ ಆಲೌಟ್ ಆದರು. ಡೆರಿಲ್ ಮಿಚೆಲ್ 130 ರನ್ ಸಿಡಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ರಚಿನ್ ರವೀಂದ್ರ 75 ರನ್ ಗಳಿಸಿ ಔಟಾದರು. ಈ ವಿಶ್ವಕಪ್ ಕೂಟದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ 5 ವಿಕೆಟ್ ಕಬಳಿಸಿ ಮಿಂಚಿದರು.
ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ಎಂದಿನಂತೆ ರೋಹಿತ್ ಶರ್ಮಾ-ಶುಬ್ಮನ್ ಗಿಲ್ ಜೋಡಿ ಸ್ಪೋಟಕ ಆರಂಭ ನೀಡಿತು. ರೋಹಿತ್ 40 ಎಸೆತಗಳಿಂದ 4 ಸಿಕ್ಸರ್ ಸಹಿತ 46 ರನ್ ಸಿಡಿಸಿ ಔಟಾದರೆ ಗಿಲ್ 26 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಈ ಇಬ್ಬರೂ ಮೊದಲ ವಿಕೆಟ್ ಗೆ 71 ರನ್ ಒಟ್ಟುಗೂಡಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿ ತಮ್ಮ ಅನುಭವದ ಧಾರೆಯೆರೆದು ಕೊನೆಯವರೆಗೂ ನಿಂತು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಎಚ್ಚರಿಕೆಯ ಆಟಕ್ಕೆ ಕೈ ಹಾಕಿದ ಕೊಹ್ಲಿ ಸಿಂಗಲ್ಸ್ ಕಡೆಗೆ ಹೆಚ್ಚು ಗಮನ ಕೊಟ್ಟರು. ಅವರಿಗೆ ಕೆಲ ಹೊತ್ತು ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಬಿರುಸಿನ 33 ರನ್ ಸಿಡಿಸಿ ಔಟಾದರು. ಈ ಟೂರ್ನಿಯಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ 27 ರನ್ ಗಳಿಗೆ ಔಟಾದರು. ಇದೇ ಮೊದಲ ಬಾರಿಗೆ ಅವಕಾಶ ಪಡೆದಿದ್ದ ಸೂರ್ಯಕುಮಾರ್ ಯಾದವ್ ಕೇವಲ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ಸಂದರ್ಭದಲ್ಲಿ ಭಾರತ ಕೊಂಚ ಒತ್ತಡಕ್ಕೆ ಒಳಗಾಗಿತ್ತು.
ಆದರೆ ಆಲ್ ರೌಂಡರ್ ರವೀಂದ್ರ ಜಡೇಜಾ ತಮಗೆ ಸಿಕ್ಕ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದರು. ಒಟ್ಟು 44 ಎಸೆತ ಎದುರಿಸಿದ ಅವರು ಔಟಾಗದೇ 39 ರನ್ ಗಳಿಸಿದರು. ಆದರೆ ಸತತ ಎರಡನೇ ಶತಕದ ನಿರೀಕ್ಷೆಯಲ್ಲಿದ್ದ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಕೊನೆಯ ಗಳಿಗೆಯಲ್ಲಿ 95 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಔಟಾದಾಗ ಇಡೀ ಕ್ರೀಡಾಂಗಣದಲ್ಲಿ ಮೌನ ಮನೆ ಮಾಡಿತ್ತು. ಆದರೆ ಅಷ್ಟರಲ್ಲಾಗಲೇ ಕೊಹ್ಲಿ ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದರು. ಶತಕ ವಂಚಿತರಾದರೂ ಅವರ ಈ ಇನಿಂಗ್ಸ್ ಗೆ ಶತಕಕ್ಕಿಂತ ಹೆಚ್ಚು ಬೆಲೆ ಸಿಕ್ಕಿತ್ತು. ಅಂತಿಮವಾಗಿ ಟೀಂ ಇಂಡಿಯಾ 48 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಗಳಿಸುವ ಮೂಲಕ ಈ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಜೇಯ ಯಾತ್ರೆಯನ್ನು ಮುಂದುವರಿಸಿತು.