ಮುಂಬೈ: ಏಷ್ಯಾ ಕಪ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ತೋರಿದ್ದ ಪ್ರದರ್ಶನವನ್ನು ಇಂದು ಟೀಂ ಇಂಡಿಯಾ ಮತ್ತೆ ರಿಪೀಟ್ ಮಾಡಿದೆ. ಏಕದಿನ ವಿಶ್ವಕಪ್ ನ ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ 302 ರನ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಆದರೆ ಈ ಮೊತ್ತ ಬೆನ್ನತ್ತಿದ ಲಂಕಾಗೆ ಮತ್ತೆ ಟೀಂ ಇಂಡಿಯಾ ವೇಗಿಗಳು ಇನ್ನಿಲ್ಲದಂತೆ ಕಾಡಿದರು.
ಮೊದಲ ಬಾಲ್ ನಲ್ಲೇ ವಿಕೆಟ್ ಮೂಲಕ ಬುಮ್ರಾ ಶುಭಾರಂಭ ಮಾಡಿದರು. ಮುಂದಿನ ಓವರ್ ನಲ್ಲಿ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಕಬಳಿಸಿ ಆಘಾತ ನೀಡಿದರು. ಇಷ್ಟು ದಿನ ವಿಶ್ವಕಪ್ ನಲ್ಲಿ ಸೈಲೆಂಟ್ ಆಗಿದ್ದ ಸಿರಾಜ್ ಇಂದು ಮತ್ತೆ ಏಷ್ಯಾ ಕಪ್ ಫೈನಲ್ ನಲ್ಲಿ ಮಿಂಚಿದಂತೆ ಲಂಕನ್ನರ ಬಾಲ ಕತ್ತರಿಸಿದರು. ಬಳಿಕ ಮೊಹಮ್ಮದ್ ಶಮಿ ಶೋ. ಮೊದಲ ಓವರ್ ನಲ್ಲಿಯೇ ಎರಡು ಸತತ ಬಾಲ್ ಗಳಲ್ಲಿ ವಿಕೆಟ್ ಪಡೆದ ಶಮಿ ಮತ್ತೊಮ್ಮೆ 5 ವಿಕೆಟ್ ಗಳ ಗೊಂಚಲು ಪಡೆದರು. ಕೊನೆಯ ವಿಕೆಟ್ ಮಾತ್ರ ರವೀಂದ್ರ ಜಡೇಜಾ ಪಾಲಾಯಿತು. ಉಳಿದಂತೆ ಶಮಿ 5, ಸಿರಾಜ್ 3, ಬುಮ್ರಾ 1 ವಿಕೆಟ್ ಕಬಳಿಸಿದರು. ಲಂಕಾ ಪರ ಐವರು ಬ್ಯಾಟಿಗರು ಶೂನ್ಯ ಸುತ್ತಿದರು. ಕಸುನ್ ರಜಿತ 14 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಅಂತಿಮವಾಗಿ ಲಂಕಾ 19.4 ಓವರ್ ಗಳಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಯಿತು.