ಮುಂಬೈ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದೆ.
ಈ ವಿಶ್ವಕಪ್ ಕೂಟದಲ್ಲಿ ಭಾರತಕ್ಕೆ ಇದು 7 ನೇ ಪಂದ್ಯವಾಗಿದೆ. ಇದುವರೆಗೆ ಆರು ಪಂದ್ಯಗಳಲ್ಲೂ ಭಾರತಕ್ಕೆ ಒಮ್ಮೆಯೂ 300 ಪ್ಲಸ್ ರನ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇಂದು ಆ ಸಾಧನೆಯನ್ನೂ ಮಾಡಿದೆ.
ಮೊದಲು ಬ್ಯಾಟಿಂಗ್ ಗಿಳಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ರೂಪದಲ್ಲಿ ಆಘಾತ ಸಿಕ್ಕಿತು. ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ರೋಹಿತ್ ಎರಡನೇ ಎಸೆತದಲ್ಲಿ ಬೌಲ್ಡ್ ಔಟ್ ಆಗಿ ನಿರ್ಗಮಿಸಿದಾಗ ಮೈದಾನ ಸ್ತಬ್ಧವಾಯಿತು. ರೋಹಿತ್ ಗೆ ಇದು ತವರಿನ ಅಂಕಣ. ಜೊತೆಗೆ ಈ ವಿಶ್ವಕಪ್ ನಲ್ಲಿ ಅವರು ಅದ್ಭುತ ಫಾರ್ಮ್ ನಲ್ಲಿದ್ದಾರೆ. ಅವರ ಬ್ಯಾಟಿಂಗ್ ನೋಡಲೆಂದು ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.
ಆದರೆ ನಂತರ ಗಿಲ್-ಕೊಹ್ಲಿ ಜೋಡಿ ಬ್ಯಾಟಿಂಗ್ ಆ ನೋವು ಮರೆಸಿತು. ಇಬ್ಬರೂ ಪೈಪೋಟಿ ನಡೆಸಿ ರನ್ ಗಳಿಸುತ್ತಾ ಶತಕದತ್ತ ದಾಪುಗಾಲಿಡುತ್ತಿದ್ದರು. ಆದರೆ ದುರದೃಷ್ಟವಶಾತ್ 90 ರನ್ ಗಳಿಸಿದ್ದ ಗಿಲ್ ಇಲ್ಲದ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ಶತಕ ವಂಚಿತರಾದರು. ಆದರೆ ಕೊಹ್ಲಿ ಆದರೂ ಶತಕ ಗಳಿಸಬಹುದೆಂದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಕೊಹ್ಲಿ ಕೂಡಾ 88 ರನ್ ಗಳಿಗೆ ಔಟಾದಾಗ ಪ್ರೇಕ್ಷಕರಿಗೂ ತೀವ್ರ ನಿರಾಸೆಯಾಯಿತು. ಈ ಇಬ್ಬರೂ 2 ನೇ ವಿಕೆಟ್ ಗೆ 189 ರನ್ ಗಳ ಜೊತೆಯಾಟವಾಡಿದರು.
ನಂತರ ಕೆಎಲ್ ರಾಹುಲ್ 21, ಸೂರ್ಯಕುಮಾರ್ ಯಾದವ್ 12 ರನ್ ಗಳಿಗೆ ಔಟಾಗಿ ತಂಡಕ್ಕೆ ಕೊಂಚ ಸಂಕಷ್ಟ ತಂದಿಟ್ಟರು. ಆದರೆ ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟಿಂಗ್ ಮಾಡಿದರು. ಕೇವಲ 56 ಎಸೆತ ಎದುರಿಸಿದ ಅವರು 82 ರನ್ ಗಳಿಸಿ ಔಟಾದರು. ಅವರ ಶತಕದ ಕನಸಿಗೂ ಕೊಳ್ಳಿ ಇಟ್ಟಿದ್ದು ಮದುಶಂಕ ಎನ್ನುವುದು ವಿಶೇಷ. ಕೊನೆಯಲ್ಲಿ ಜಡೇಜಾ ಬಿರುಸಿನ 35 ರನ್ ಗಳಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರು. ಲಂಕಾ ಪರ ಅದ್ಭುತ ಸ್ಪೆಲ್ ಮಾಡಿದ ಮದುಶಂಕ ಪ್ರಮುಖ 5 ವಿಕೆಟ್ ಕಬಳಿಸಿದರು.