Publish Date: Wed, 03 Jul 2024 (10:29 IST)
Updated Date: Wed, 03 Jul 2024 (10:31 IST)
ಮುಂಬೈ: ಟಿ20 ವಿಶ್ವಕಪ್ ಚಾಂಪಿಯನ್ ಆದ ಬಳಿಕ ಟೀಂ ಇಂಡಿಯಾ ತವರಿಗೆ ಬರುವುದನ್ನೇ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಬಿಸಿಸಿಐ ಬಿಗ್ ಅಪ್ ಡೇಟ್ ಒಂದನ್ನು ನೀಡಿದೆ.
ಶನಿವಾರವೇ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮುಕ್ತಾಯವಾಗಿದ್ದರೂ ಇದುವರೆಗೆ ಆಟಗಾರರಿಗೆ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ. ಬಾರ್ಬಡೋಸ್ ನಲ್ಲಿ ಬೆರಿಲ್ ಚಂಡಮಾರುತದಿಂದಾಗಿ ಆಟಗಾರರು ಹೋಟೆಲ್ ರೂಂನಲ್ಲಿಯೇ ಎರಡು ದಿನ ಉಳಿಯಬೇಕಾಗಿ ಬಂತು.
ವಿಮಾನ ಹಾರಾಟವೂ ರದ್ದಾಗಿದ್ದರಿಂದ ಟೀಂ ಇಂಡಿಯಾ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ. ಇದೀಗ ವಾತಾವರಣ ತಿಳಿಯಾಗಿದ್ದು ಕ್ರಿಕೆಟಿಗರು ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಶ್ವಕಪ್ ನ ವಿಡಿಯೋವೊಂದನ್ನು ಹಂಚಿಕೊಂಡ ಬಿಸಿಸಿಐ ಹೋಂ ಕಮಿಂಗ್ ಎಂದು ಬರೆದುಕೊಂಡಿದೆ.
ಇಂದು ಸಂಜೆ ಟೀಂ ಇಂಡಿಯಾ ಕ್ರಿಕೆಟಿಗರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ತಲುಪುವ ಸಾಧ್ಯತೆಯಿದೆ. ಅದಾದ ಬಳಿಕ ಪ್ರಧಾನಿ ಮೋದಿಯನ್ನು ಭೇಟಿಯಾಗುವ ಸಾಧ್ಯತೆಯಿದ್ದು ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿಯಿದೆ. ವಿಶ್ವವಿಜೇತರನ್ನು ನೋಡಲು ಅಭಿಮಾನಿಗಳೂ ಕಾಯುತ್ತಿದ್ದಾರೆ.