ರಾವಲ್ಪಿಂಡಿ: ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಶತಕ ಸಿಡಿಸಿದ ಬಳಿಕ ಸಂಭ್ರಮಾಚರಿಸುವಾಗ ವಿರಾಟ್ ಕೊಹ್ಲಿ ಸ್ಟೈಲ್ ಕಾಪಿ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ತೀವ್ರ ಟೀಕೆ ಮಾಡಿದ್ದಾರೆ.
ಈ ಪಂದ್ಯವನ್ನು ಪಾಕಿಸ್ತಾನ 8 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಶ್ರೀಲಂಕಾ ನೀಡಿದ 289 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 48.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತು. ಇದಕ್ಕೆ ಬಾಬರ್ ಅಜಮ್ ಅಜೇಯವಾಗಿ 102 ರನ್ ಗಳಿಸಿದ್ದು ಪ್ರಮುಖ ಪಾತ್ರ ವಹಿಸಿತು.
ಕಳೆದ ಕೆಲವು ಸಮಯದಿಂದ ಬಾಬರ್ ರನ್ ಬರಗಾಲ ಎದುರಿಸುತ್ತಿದ್ದರು. ಆದರೆ ಈ ಪಂದ್ಯದಲ್ಲಿ 20 ನೇ ಶತಕ ಸಿಡಿಸುವ ಮೂಲಕ ಫಾರ್ಮ್ ಗೆ ಬಂದರು. ಶತಕ ಸಿಡಿಸಿದ ಬಳಿಕ ಬಾಬರ್ ಸಂಭ್ರಮಿಸಿದ ಶೈಲಿ ವಿರಾಟ್ ಕೊಹ್ಲಿ ಈ ಹಿಂದೆ ರನ್ ಬರಗಾಲದಿಂದ ಹೊರಬಂದು ಎರಡು ವರ್ಷಗಳ ನಂತರ ಶತಕ ಸಿಡಿಸಿದಾಗ ಸಂಭ್ರಮಿಸಿದ ಶೈಲಿಯಲ್ಲೇ ಇತ್ತು.
ಕೊಹ್ಲಿಯಂತೇ ಈಗ ಬಾಬರ್ ಕೂಡಾ ಬ್ಯಾಟ್ ಹಿಡಿದು ಸಂಭ್ರಮಿಸಿದ್ದಲ್ಲದೆ ನೆಲಕ್ಕೆ ನಮಸ್ಕಾರ ಮಾಡಿದ್ದಾರೆ. ನಂತರ ತಮ್ಮ ಲಾಕೆಟ್ ಹಿಡಿದು ಕಿಸ್ ಮಾಡಿದ್ದಾರೆ. ಇದೆಲ್ಲವೂ ಕೊಹ್ಲಿ ಶೈಲಿ. ಇದಕ್ಕೇ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇಲ್ಲೂ ಸ್ವಂತಿಕೆ ಇಲ್ವಾ? ಇಲ್ಲೂ ಕೊಹ್ಲಿ ಸ್ಟೈಲ್ ಕಾಪಿ ಮಾಡ್ತೀರಲ್ಲಾ? ಆದರೆ ನೀವು ಎಂದಿಗೂ ಕೊಹ್ಲಿ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.