Publish Date: Fri, 09 Feb 2024 (12:46 IST)
Updated Date: Fri, 09 Feb 2024 (12:49 IST)
ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದ ಎಬಿಡಿ ವಿಲಿಯರ್ಸ್ ಈಗ ತಮ್ಮ ಹೇಳಿಕೆ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ.
ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಎಬಿಡಿ ಇತ್ತೀಚೆಗೆ ಕೊಹ್ಲಿ ಪದೇ ಪದೇ ಟೀಂ ಇಂಡಿಯಾದಿಂದ ಗೈರಾಗುತ್ತಿರುವುದಕ್ಕೆ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಕಾರಣ ಎಂದಿದ್ದರು. ಕೊಹ್ಲಿ ಮತ್ತು ಎಬಿಡಿ ನಡುವಿನ ಗೆಳೆತನ ಎಲ್ಲರಿಗೂ ಗೊತ್ತು. ಆರ್ ಸಿಬಿ ತಂಡದ ಈ ಕುಚಿಕು ಗೆಳೆಯ ಕೊಹ್ಲಿ ಬಗ್ಗೆ ಇಂತಹದ್ದೊಂದು ಹೇಳಿಕೆ ನೀಡಿದಾಗ ಎಲ್ಲರೂ ಇದನ್ನು ನಿಜವೆಂದು ಖಚಿತಪಡಿಸಿಕೊಂಡಿದ್ದರು.
ಯಾಕೆಂದರೆ ಇದಕ್ಕೆ ಮೊದಲು ಅನುಷ್ಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಜೋರಾಗಿ ಓಡಾಡುತ್ತಿತ್ತು. ಆದರೆ ಇದರ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಇರಲಿಲ್ಲ. ಆದರೆ ಎಬಿಡಿ ಇಂತಹದ್ದೊಂದು ಹೇಳಿಕೆ ನೀಡಿ ಕೊಹ್ಲಿ ದಂಪತಿ ಇದುವರೆಗೆ ಗೌಪ್ಯವಾಗಿಟ್ಟಿದ್ದ ಮಾಹಿತಿ ಹೊರಬಂತು ಎಂದು ಎಲ್ಲೆಡೆ ವೈರಲ್ ಆಯಿತು.
ಇದೀಗ ಎಬಿಡಿ ತಮ್ಮ ಹೇಳಿಕೆ ವೈರಲ್ ಆದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಎಲ್ಲರಿಗೂ ಕುಟುಂಬವೇ ಆದ್ಯತೆಯಾಗಿರುತ್ತದೆ. ಆದರೆ ಆ ಸಂದರ್ಶನದಲ್ಲಿ ನಾನು ದೊಡ್ಡ ತಪ್ಪು ಮಾಡಿದೆ. ತಪ್ಪಾದ ಮಾಹಿತಿಯನ್ನು ಹಂಚಿಕೊಂಡೆ. ಯಾರಿಗೂ ಏನಾಗುತ್ತಿದೆ ಎಂದು ಗೊತ್ತಿಲ್ಲ. ನಾನು ಆತನಿಗೆ ಶುಭಾಶಯವನ್ನಷ್ಟೇ ಹೇಳಬಲ್ಲೆ ಎಂದಿದ್ದಾರೆ. ಆ ಮೂಲಕ ತಮ್ಮ ಮೊದಲಿನ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.