ಮುಂಬೈ: ನಟ ಸೋನು ಸೂದ್ ಲಾಕ್ ಡೌನ್ ಸಮಯದಲ್ಲಿ ಹಲವು ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಬಸ್, ವಿಮಾನ ವ್ಯವಸ್ಥೆ ಮಾಡಿ ಸುದ್ದಿಯಾಗಿದ್ದರು. ಈ ನಡುವೆ ಸೋನು ಪತ್ನಿಯ ಸಾವಿನ ದುಃಖದಲ್ಲಿರುವ ವ್ಯಕ್ತಿಗೆ ಸಹಾಯ ಮಾಡಲು ಭರವಸೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಸೋನುಗೆ ಟ್ವೀಟ್ ಮಾಡಿರುವ ಅಭಿಮಾನಿಯೊಬ್ಬರು ನಮ್ಮ ನೆರೆಮನೆಯ ವ್ಯಕ್ತಿ ಸೀತಾರಾಮ್ ಎಂಬವರ ಪತ್ನಿ ಅವರ ಊರು ವಾರಣಾಸಿಯಲ್ಲಿ ತೀರಿಕೊಂಡಿದ್ದಾರೆ. ಆದರೆ ಅವರಿಗೆ ಅಲ್ಲಿಗೆ ಹೋಗಲು ಸಾಧ‍್ಯವಾಗುತ್ತಿಲ್ಲ. ಕೊನೆಗೆ ನಮಗೆ ನೀವೇ ದಿಕ್ಕು ಎಂದು ತೋಚಿ ಈ ಟ್ವೀಟ್ ಮಾಡುತ್ತಿದ್ದೇವೆ. ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸೋನು ‘ಪತ್ನಿಯನ್ನು ಕಳೆದುಕೊಂಡ ಆ ವ್ಯಕ್ತಿಗೆ ನನ್ನ ಸಂತಾಪಗಳು. ನಾಳೆಯೇ ಅವರನ್ನು ಕಳುಹಿಸಿಕೊಡಲು ವ್ಯವಸ್ಥೆ ಮಾಡುತ್ತೇನೆ. ಯಾರಾದರೂ ಅವರ ಜತೆಗೆ ಹೋಗುವವರಿದ್ದರೆ ಅವರ ವಿವರಗಳನ್ನೂ ನನಗೆ ಕಳುಹಿಸಿಕೊಡಿ. ವ್ಯವಸ್ಥೆ ಮಾಡಿಕೊಡುತ್ತೇನೆ’ ಎಂದಿದ್ದಾರೆ. ಸೋನು ಈ ರೀತಿ ತ್ವರಿತವಾಗಿ ಪ್ರತಿಕ್ರಿಯೆ ನೀಡಿರುವುದಕ್ಕೆ ನೆಟ್ಟಿಗರು ಅಭಿನಂದಿಸಿದ್ದಾರೆ.