ಮುಂಬೈ: ಆಪರೇಷನ್ ಸಿಂಧೂರ್ ಮಾಡಿ ಉಗ್ರರನ್ನು ಭಾರತೀಯ ಸೇನೆ ಸದೆಬಡಿದಾಗ ಮೌನವಾಗಿದ್ದ ನಟ ಸಲ್ಮಾನ್ ಖಾನ್, ಕದನವಿರಾಮ ಘೋಷಣೆಯಾಗುತ್ತಿದ್ದಂತೇ ಖುಷಿ ಹಂಚಿಕೊಂಡಿದ್ದರು. ಇದಕ್ಕೆ ನೆಟಟಿಗರು ಅವರನ್ನು ಸರಿಯಾಗಿಯೇ ಝಾಡಿಸಿದ್ದಾರೆ.
ಪಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು.
ಆದರೆ ಆಗ ಬಾಲಿವುಡ್ ಖಾನ್ ತ್ರಯರು ಮೌನವಾಗಿದ್ದರು. ಸಲ್ಮಾನ್ ಖಾನ್ ಒಂದೇ ಒಂದು ಪ್ರತಿಕ್ರಿಯೆ ನೀಡಿರಲಿಲ್ಲ. ಇದರ ಬಗ್ಗೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇವರೆಲ್ಲಾ ದೇಶ ನೋಡುತ್ತಿಲ್ಲ, ತಮ್ಮ ಧರ್ಮವನ್ನೇ ನೋಡುತ್ತಿದ್ದಾರೆ ಎಂದಿದ್ದರು.
ಅದಕ್ಕೆ ತಕ್ಕಂತೇ ಈಗ ಕದನ ವಿರಾಮ ಘೋಷಣೆಯಾಗುತ್ತಿದ್ದಂತೇ ಸಲ್ಮಾನ್ ಎಕ್ಸ್ ನಲ್ಲಿ ಸದ್ಯ ಕದನವಿರಾಮ ಘೋಷಣೆಯಾಯಿತು, ಧನ್ಯವಾದ ದೇವರೇ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಅವರನ್ನು ನೆಟ್ಟಿಗರು ಇನ್ನಿಲ್ಲದಂತೆ ಝಾಡಿಸಿದ್ದಾರೆ. ನಿಮಗೆಲ್ಲಾ ನಮ್ಮ ಸೇನೆಯ ಸಾಹಸಕ್ಕಿಂತ ಪಕ್ಕದ ಶತ್ರುರಾಷ್ಟ್ರ ಬಚಾವ್ ಆಗಿದ್ದೇ ಖುಷಿಯಾದಂತಿದೆ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ವಿವಾದದ ಬೆನ್ನಲ್ಲೇ ಸಲ್ಮಾನ್ ತಮ್ಮ ಟ್ವೀಟ್ ನ್ನೇ ಅಳಿಸಿದ್ದಾರೆ.