Publish Date: Wed, 21 Feb 2024 (08:31 IST)
Updated Date: Wed, 21 Feb 2024 (08:31 IST)
ಮುಂಬೈ: ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಹೀಗೊಂದು ಸುದ್ದಿ ಈಗ ಬಾಲಿವುಡ್ ಅಂಗಳದಿಂದ ಬಲವಾಗಿ ಕೇಳಿಬರುತ್ತಿದೆ.
ಇತ್ತೀಚೆಗೆ BAFTA ರೆಡ್ ಕಾರ್ಪೆಟ್ ನಲ್ಲಿ ದೀಪಿಕಾ ಸೀರೆ ಉಟ್ಟುಕೊಂಡು ಎಲ್ಲರ ಗಮನ ಸೆಳೆದಿದ್ದರು. ವಿದೇಶದಲ್ಲೂ ಭಾರತೀಯ ಉಡುಗೆ ತೊಟ್ಟು ಮಿಂಚಿದ್ದಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಅಸಲಿಗೆ ದೀಪಿಕಾ ಸೀರೆ ಉಡಲು ಇನ್ನೊಂದು ಕಾರಣವೂ ಇದೆ. ಆಕೆ ಈಗ ಗರ್ಭಿಣಿಯಾಗಿದ್ದು, ತನ್ನ ಉಬ್ಬುಹೊಟ್ಟೆ ಕಾಣದೇ ಇರಲು ಸೀರೆ ಉಟ್ಟಿದ್ದರು ಎಂಬ ಗುಸು ಗುಸು ಹಬ್ಬಿದೆ.
ಆಂಗ್ಲ ಮಾಧ‍್ಯಮವೊಂದರ ವರದಿ ಪ್ರಕಾರ ದೀಪಿಕಾ ಈಗ ಎರಡನೇ ತ್ರೈಮಾಸಿಕದಲ್ಲಿದ್ದಾರೆ. ಹೀಗಾಗಿಯೇ ಸೀರೆ ಉಟ್ಟುಕೊಂಡು ಹೋಗಿದ್ದರು ಎನ್ನಲಾಗುತ್ತಿದೆ. ಇದೀಗ ದೀಪಿಕಾ ಮುಂಬೈಗೆ ಮರಳಿದ್ದಾರೆ. ಇದರ ಬೆನ್ನಲ್ಲೇ ಮೊದಲ ಮಗುವಿನ ಬಗ್ಗೆ ಸುದ್ದಿ ಕೇಳಿಬರುತ್ತಿದೆ.
2018 ರಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅದಾದ ಬಳಿಕ ಹಲವು ಬಾರಿ ಈ ದಂಪತಿ ಮಗುವಿನ ಬಗ್ಗೆ ರೂಮರ್ ಗಳು ಬಂದಿದ್ದು ಇದೆ. ಇತ್ತೀಚೆಗೆ ದೀಪಿಕಾ ಸಂದರ್ಶನವೊಂದರಲ್ಲಿ ತನಗೆ ಹಾಗೂ ರಣವೀರ್ ಗೆ ಮಗು ಮಾಡಿಕೊಳ್ಳುವ ಇರಾದೆ ಇದೆ ಎಂದಿದ್ದರು. ಸದ್ಯದಲ್ಲೇ ಮಗು ಮಾಡಿಕೊಳ್ಳುವುದಾಗಿ ಹೇಳಿದ್ದರು. ನನ್ನ ಕುಟುಂಬ ನನ್ನನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿದೆ. ನಾನು ಮತ್ತು ರಣವೀರ್ ಕೂಡಾ ನಮ್ಮ ಮಗುವನ್ನು ಅದೇ ರೀತಿ ಬೆಳೆಸಲು ಇಷ್ಟಪಡುತ್ತೇವೆ. ಯಾವತ್ತೂ ವಿನಮ್ರವಾಗಿರಲು ಕಲಿಸುತ್ತೇವೆ ಎಂದು ಸಂದರ್ಶನವೊಂದರಲ್ಲಿ ಭವಿಷ್ಯದಲ್ಲಿ ತಮಗೆ ಹುಟ್ಟಲಿರುವ ಮಗುವಿನ ಬಗ್ಗೆ ಕನಸು ಹೇಳಿಕೊಂಡಿದ್ದರು.
ಇತ್ತೀಚೆಗಷ್ಟೇ ದೀಪಿಕಾ ನಟಿಸಿದ್ದ ಫೈಟರ್ ಸಿನಿಮಾ ತೆರೆ ಕಂಡಿತ್ತು. ಅದಾದ ಬಳಿಕ ಅವರು ಬ್ರೇಕ್ ನಲ್ಲಿದ್ದಾರೆ. ಈ ನಡುವೆ ಈಗ ಕೇಳಿಬಂದಿರುವ ಸುದ್ದಿ ನಿಜಾನಾ ಎಂದು ಅವರೇ ಸ್ಪಷ್ಟನೆ ಕೊಡಬೇಕಿದೆ.