ಮುಂಬೈ: ಹೃತಿಕ್ ರೋಷನ್-ದೀಪಿಕಾ ಪಡುಕೋಣೆ ಪ್ರಧಾನ ಪಾತ್ರದಲ್ಲಿ ನಟಿಸಿರುವ ಫೈಟರ್ ಸಿನಿಮಾ ಇಂದಿನಿಂದ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ ಫೈಟರ್ ಸಿನಿಮಾಗೆ ಗಲ್ಫ್ ರಾಷ್ಟ್ರಗಳಲ್ಲಿ ನಿಷೇಧ ಹೇರಿಸಲಾಗಿದೆ.
ಸಿದ್ಧಾರ್ಥ್ ಆನಂದ್ ಆಕ್ಷನ್ ಸಿನಿಮಾಗಳ ನಿರ್ದೇಶನಕ್ಕೆ ಹೆಸರುವಾಸಿ. ಫೈಟರ್ ಸಿನಿಮಾ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಹೀಗಾಗಿ ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳಿಗೇನೂ ಬರವಿಲ್ಲ. ಆದರೆ ಈ ಸಿನಿಮಾವನ್ನು ಗಲ್ಫ್ ರಾಷ್ಟ್ರಗಳು ತಮ್ಮ ದೇಶದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಿಲ್ಲ.
ಆದರೆ ಸಿನಿಮಾ ನಿಷೇಧಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ ಸಿನಿಮಾದ ಟ್ರೈಲರ್ ನಲ್ಲೇ ಸಾಕಷ್ಟು ಸಾಹಸ ದೃಶ್ಯಗಳಿತ್ತು. ಜೊತೆಗೆ ಚಿತ್ರದಲ್ಲಿ ಪಾಕಿಸ್ತಾನಿ ಸೈನ್ಯವನ್ನು, ರಾಜಕಾರಣಿಗಳನ್ನು ಖಳರಂತೆ ತೋರಿಸಲಾಗಿದೆ. ಬಹುಶಃ ಇದೇ ಕಾರಣಕ್ಕೆ ಚಿತ್ರಕ್ಕೆ ಗಲ್ಫ್ ರಾಷ್ಟ್ರಗಳು ನಿಷೇಧ ಹೇರಿರಬಹುದು ಎನ್ನಲಾಗಿದೆ.
ಬಹುತೇಕ ಗಲ್ಫ್ ರಾಷ್ಟ್ರಗಳು ಪಾಕಿಸ್ತಾನದ ಜೊತೆ ಸ್ನೇಹ ಸಂಬಂಧ ಹೊಂದಿದೆ. ಹೀಗಾಗಿ ಫೈಟರ್ ಸಿನಿಮಾಗೆ ನಿಷೇಧ ಹೇರಿರಬಹುದು ಎಂದು ವಿಶ್ಲೇಷಿಸಲಾಗಿದೆ. ಈ ಹಿಂದೆ ದಳಪತಿ ವಿಜಯ್ ನಾಯಕರಾಗಿದ್ದ ಬೀಸ್ಟ್ ಸಿನಿಮಾಗೂ ಇದೇ ಕಾರಣಕ್ಕೆ ಗಲ್ಫ್ ರಾಷ್ಟ್ರದಲ್ಲಿ ನಿಷೇಧ ಹೇರಲಾಗಿತ್ತು.
ಇದಲ್ಲದೆ ಸಿನಿಮಾದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳಿವೆ. ಇಂತಹ ದೃಶ್ಯಗಳಿಗೆ ಅಲ್ಲಿ ಪ್ರೋತ್ಸಾಹವಿರುವುದಿಲ್ಲ. ಬಾಲಿವುಡ್ ಸಿನಿಮಾಗಳಿಗೆ ದುಬೈ ದೊಡ್ಡ ಮಾರುಕಟ್ಟೆಯಾಗಿದೆ. ಇದೀಗ ಫೈಟರ್ ಸಿನಿಮಾಗೆ ನಿಷೇಧ ಹೇರಿರುವುದು ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಲಿದೆ.