Publish Date: Thu, 31 Mar 2022 (16:51 IST)
Updated Date: Thu, 31 Mar 2022 (16:53 IST)
ಹೈದರಾಬಾದ್: ತ್ರಿಬಲ್ ಆರ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ನಡುವೆ ನಾಯಕಿ ಅಲಿಯಾ ಭಟ್ ಚಿತ್ರತಂಡದ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೀಗ ಅವರೇ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾದಲ್ಲಿ ಅಲಿಯಾ ಭಟ್ ಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿಲ್ಲ ಎಂಬ ವಿಚಾರಕ್ಕೆ ಅವರು ಬೇಸರಗೊಂಡಿದ್ದಾರೆ ಎಂಬ ವರದಿಗಳಾಗಿತ್ತು. ಈ ಬಗ್ಗೆ ಅಲಿಯಾ ಇನ್ ಸ್ಟಾಗ್ರಾಂ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಾನು ಇನ್ ಸ್ಟಾಗ್ರಾಂನಲ್ಲಿ ಆರ್ ಆರ್ ಆರ್ ಗೆ ಸಂಬಂಧಿಸಿದ ಕೆಲವು ಪೋಸ್ಟ್ ಗಳನ್ನು ಡಿಲೀಟ್ ಮಾಡಿದ ಕಾರಣಕ್ಕೆ ನಾನು ಚಿತ್ರತಂಡದ ಬಗ್ಗೆ ಅಸಮಾಧಾನಗೊಂಡಿದ್ದೇನೆಂಬ ವರದಿಗಳು ಸುಳ್ಳು. ನಾನು ಆಗಾಗ ನನ್ನ ಹಳೆಯ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡುತ್ತಿರುತ್ತೇನೆ. ಸಿನಿಮಾದ ಪಾತ್ರವನ್ನು ನಾನು ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದೇ ಭಾವಿಸಿರುತ್ತೇನೆ ಎಂದು ಅಲಿಯಾ ಸ್ಪಷ್ಟನೆ ಕೊಟ್ಟಿದ್ದಾರೆ.