Select Your Language

Notifications

webdunia
webdunia
webdunia
webdunia

ಜುಲೈ 27, 2018 ರ ದೀರ್ಘಾವಧಿಯ ಬ್ಲಡ್ ಮೂನ್: ಯಾವ ರಾಶಿಗೆ ಯಾವ ಫಲ ಗೊತ್ತಾ...?

ಜುಲೈ 27, 2018 ರ ದೀರ್ಘಾವಧಿಯ ಬ್ಲಡ್ ಮೂನ್: ಯಾವ ರಾಶಿಗೆ ಯಾವ ಫಲ ಗೊತ್ತಾ...?
ಬೆಂಗಳೂರು , ಗುರುವಾರ, 26 ಜುಲೈ 2018 (19:19 IST)
ಸೌರಮಂಡಲದಲ್ಲಿ ಒಂದು ಗ್ರಹಕ್ಕೆ ಇನ್ನೊಂದು ಗ್ರಹದ ನೆರಳು ಸರಳ ರೇಖೆಯ ಮಾದರಿಯಲ್ಲಿ ಚಲಿಸಿದಾಗ ನಡೆಯುವ ಖಗೋಳಶಾಸ್ತ್ರೀಯವಾದ ಘಟನೆಯೇ ಗ್ರಹಣ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಗ್ರಹಣ ಕಾಲದಲ್ಲಿ ಕೆಲವು ಕಟ್ಟುನಿಟ್ಟಾದ ಆಚರಣೆಗಳನ್ನು ಮಾಡಬೇಕಾಗುತ್ತದೆ ಇದನ್ನು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.

ಅದಕ್ಕೆ ಕೆಲವು ವೈಜ್ಞಾನಿಕ ಹಾಗೂ ಧಾರ್ಮಿಕ ಕಾರಣಗಳು ಇವೆ ಪುರಾಣಗಳ ಪ್ರಕಾರ ಕೆಲವು ಗ್ರಹಣಗಳಲ್ಲಿ ಏನು ಮಾಡಿದರೆ ಸೂಕ್ತ ಎಂಬುದನ್ನು ಮೊದಲೇ ನಮ್ಮ ಋುಷಿಮುನಿಗಳು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ ಅದನ್ನು ಮಾಡುವ ಮೂಲಕ ಗ್ರಹಣದ ದೋಷಗಳನ್ನು ಸುಲಭವಾಗಿ ನಾವು ಕಳೆದುಕೊಳ್ಳಬಹುದಾಗಿದೆ.
 
ಇದೇ ಬರುವ ಜುಲೈ 27 ರಂದು ರಾತ್ರಿ 11.55 ರಿಂದ 28 ರ ಮಧ್ಯರಾತ್ರಿ 3.50 ರ ತನಕ ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತದೆ. ವಿಶೇಷವೇನೆಂದರೆ ಇದು ಬಹಳ ದೀರ್ಘಕಾಲ ನಡೆಯುವ ಖಗ್ರಾಸ ಚಂದ್ರಗ್ರಹಣವಾಗಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗ್ರಹಣದ ಆಚರಣೆ ಭಾರತದಲ್ಲೂ ಇರುತ್ತದೆ.
webdunia
** ಗ್ರಹಣದ ಆಚರಣೆ ಹೇಗೆ?
 
ಗ್ರಹಣದ ಪ್ರಭಾವವು ಮನುಷ್ಯ ಜೀವಿಯ ಮೇಲೂ ಆಗುವುದರಿಂದ ಮತ್ತು ಭಾರತದಲ್ಲೂ ಗೋಚರಿಸುವುದರಿಂದ ಕೆಲವು ಪೂಜೆ- ಪುನಸ್ಕಾರಗಳಿಂದ, ಜಪ-ತಪಗಳಿಂದ, ಸೀಮಿತ ಅವಧಿಯವರೆಗೆ ಆಹಾರವನ್ನು ಸೇವಿಸುವುದರಿಂದ ಹೀಗೆ ಕೆಲವು ಕಟ್ಟುನಿಟ್ಟಿನ ಆಚರಣೆಗಳನ್ನು ಮಾಡಬೇಕಾಗುತ್ತದೆ.
 
* ಗ್ರಹಣದ ದಿನ ಹಗಲು 12.29 ರವರೆಗೆ ಆಹಾರವನ್ನು ಸೇವಿಸಬಹುದು. ಆದರೆ ಅಪ್ರಾಪ್ತರು, ವೃದ್ಧರು, ಅಶಕ್ತರು, ರೋಗಿಗಳು ಗ್ರಹಣದ ದಿನ ಹಗಲು 3.38 ರ ವರೆಗೂ ಆಹಾರವನ್ನು ಸೇವಿಸಬಹುದು. 
 
* 27-07-2018, ಶುಕ್ರವಾರ ಆಷಾಢ ಶುಕ್ಲ ಪೌರ್ಣಮಿ ಶ್ರಾದ್ಧ ಮಾಡುವುದಿದ್ದರೆ ಅದನ್ನು ಮಾಡದೇ ಮಾರನೇ ದಿನ ಅಂದರೆ 28-07-2018 ರಂದೇ ಮಾಡಬೇಕು.
 
* ಗ್ರಹಣದ ಅರಂಭದಲ್ಲಿ ಹಾಗೂ ಗ್ರಹಣ ಬಿಟ್ಟ ನಂತರ ಸ್ನಾನವನ್ನು ಮಾಡಬೇಕು.
* ಗ್ರಹಣವು ಪ್ರಾರಂಭವಾದಾಗ ಸ್ನಾನ ಮಾಡಿ ಜಪ-ತಪಗಳನ್ನು ಮಾಡಿದರೆ ಉತ್ತಮ ಎಂದು ಹೇಳಲಾಗಿದೆ.
* ಗ್ರಹಣದ ಕಾಲದಲ್ಲಿ ಯಾವುದೇ ರೀತಿಯ ದ್ರವ ಆಹಾರವನ್ನಾಗಲಿ ಅಥವಾ ಘನ ಆಹಾರವನ್ನಾಗಲಿ ಸ್ವೀಕರಿಸಬಾರದು.
* ಗ್ರಹಣ ಸಂಪೂರ್ಣವಾದ ಮೇಲೆಯೇ ಅಡಿಗೆ ಮಾಡಿ ಊಟ ಮಾಡಿದರೆ ಉತ್ತಮ. 
* ಗ್ರಹಣದ ಕಾಲದಲ್ಲಿ ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಗೆ ದರ್ಭೆಯನ್ನು ಹಾಕುವುದು ವಾಡಿಕೆ.
* ಗ್ರಹಣ ಕಾಲದಲ್ಲಿ ನದಿಗಳಲ್ಲಿ ಅಥವಾ ಸಮುದ್ರ ಸ್ನಾನವು ಶ್ರೇಷ್ಠ.
* ಗ್ರಹಣ ಮುಗಿದ ಮೇಲೆ ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಣೆ ಮಾಡುವುದು ಉತ್ತಮ.
* ಗ್ರಹಣ ಪ್ರಾರಂಭವಾಗುವಾಗ ವಾತಾವರಣವು ಕಲುಷಿತವಾಗುವುದರಿಂದ ಗ್ರಹಣ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಮಾಡಿಟ್ಟ ಅಡುಗೆಯನ್ನು ಅಥವಾ ಗ್ರಹಣ ಕಾಲದಲ್ಲಿ ಅಡುಗೆ ಮಾಡಿಟ್ಟು ನಂತರ ತಿನ್ನಬಾರದು.
webdunia
ಗ್ರಹಣದಿಂದ ಯಾರ್ಯಾರಿಗೆ ಏನೇನು ಫಲ?
 
ಈ ಗ್ರಹಣವು ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆಯೆಂದು ಉತ್ತರಾಷಾಢ ಮತ್ತು ಶ್ರವಣಾ ನಕ್ಷತ್ರದಲ್ಲಿ ಮತ್ತು ಮಕರ, ಮೇಷ, ವೃಷಭ ರಾಶಿಯಲ್ಲಿ ಮತ್ತು ಮಿಥುನ ಲಗ್ನದಲ್ಲಿ ಸಂಭವಿಸಲಿದೆ. ಈ ಗ್ರಹಣವು ಮೇಷ, ಸಿಂಹ, ವೃಶ್ಚಿಕ ಹಾಗೂ ಮೀನ ರಾಶಿಗಳಿಗೆ ಶುಭಫಲಗಳನ್ನು ನೀಡಿದರೆ ಮಕರ, ಕುಂಭ, ಧನು ಹಾಗೂ ಮಿಥುನ ರಾಶಿಗಳಿಗೆ ಅಶುಭ ಫಲಗಳನ್ನು ನೀಡುತ್ತದೆ ಮತ್ತು ವೃಷಭ, ಕರ್ಕಾಟಕ, ಕನ್ಯಾ, ತುಲಾ ರಾಶಿಗಳಿಗೆ ಮಿಶ್ರ ಫಲಗಳನ್ನು ನೀಡುತ್ತದೆ. ಮುಖ್ಯವಾಗಿ ಉತ್ತರಾಷಾಢ, ಕೃತ್ತಿಕಾ, ಉತ್ತರಾ, ಶ್ರವಣಾ, ರೋಹಿಣಿ ಮತ್ತು ಹಸ್ತಾ ನಕ್ಷತ್ರದವರಿಗೆ ತೀವ್ರವಾದ ತೊಂದರೆ ಕಾಡಲಿದೆ. ಇನ್ನು ಈ ಗ್ರಹಣದಿಂದ ಯಾವ್ಯಾವ ರಾಶಿಗೆ ಏನೇನು ಪರಿಣಾಮಗಳು ಆಗಲಿದೆ ಎಂದು ನೋಡೋಣ.
 
1. ಮೇಷ: ಈ ರಾಶಿಯವರಿಗೆ ಈ ಗ್ರಹಣದಿಂದ ಶುಭ ಸಮಾಚಾರವನ್ನು ಕೇಳುವ ಯೋಗವಿದೆ. ಎಷ್ಟೋ ದಿನಗಳಿಂದ ಕೈಗೂಡದೇ ಇದ್ದ ಕೆಲಸ ಕಾರ್ಯಗಳು ಆದಷ್ಟು ಬೇಗ ಮುಗಿಯುವ ಲಕ್ಷಣವಿದೆ. ಚಿಂತೆಗಳು ದೂರವಾಗುತ್ತದೆ.
 
2. ವೃಷಭ: ಈ ರಾಶಿಯವರಿಗೆ ಈ ಗ್ರಹಣವು ಮಿಶ್ರ ಫಲಗಳನ್ನು ನೀಡಬಹುದು. ಆದರೆ ಹೆಚ್ಚು ಮಾತನಾಡದೇ ಇದ್ದರೆ ಎಷ್ಟೋ ಸಂಭವನೀಯ ಅವಮಾನಗಳಿಂದ ತಪ್ಪಿಸಿಕೊಳ್ಳಬಹುದು. ಅಂದರೆ ನಿಮ್ಮಷ್ಟಕ್ಕೆ ನೀವು ಇದ್ದು ಇತರರಿಗೆ ಸಂಬಂಧಪಟ್ಟ ವಿಚಾರಗಳಿಗೆ ಮೂಗು ತೂರಿಸದೇ ಇದ್ದರೆ ಉತ್ತಮ.
 
3. ಮಿಥುನ: ಈ ರಾಶಿಯವರಿಗೆ ಗ್ರಹಣವು ಅಶುಭ ಫಲಗಳನ್ನು ನೀಡುತ್ತಿದ್ದು, ಉದ್ಯೋಗ, ಕುಟುಂಬ, ವೃತ್ತಿ- ವ್ಯಾಪಾರದ ವಿಚಾರದಲ್ಲಿ ಮೇಲಿಂದ ಮೇಲೆ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಲಿದೆ. ಅಂದರೆ ಅಂದುಕೊಂಡ ಕೆಲಸಗಳು ಸಲೀಸಾಗಿ ನಡೆಯುವುದಿಲ್ಲ.
 
4. ಕರ್ಕಾಟಕ: ಈ ರಾಶಿಯವರಿಗೆ ಈ ಗ್ರಹಣವು ಮಿಶ್ರ ಫಲಗಳನ್ನು ನೀಡುತ್ತಿದೆ. ಆದರೆ ಈಗಾಗಲೇ ಯಾರಿಗೂ ತಿಳಿಯದಂತೆ ವ್ಯವಹಾರಗಳನ್ನು ಮಾಡಿದ್ದರೆ, ಅದರಿಂದ ನಿಮಗೆ ತೊಂದರೆ ಆಗುವ ಸಂಭವವಿದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಜಪ-ತಪಗಳನ್ನು ತಪ್ಪದೇ ಮಾಡುವುದು ಒಳಿತು.
 
5. ಸಿಂಹ: ಈ ರಾಶಿಯವರಿಗೆ ಈ ಗ್ರಹಣವು ಶುಭಫಲವನ್ನು ನೀಡುತ್ತದೆ. ಶುಭಸುದ್ದಿಯನ್ನು ಕೇಳುವ ಸಂದರ್ಭ ಎದುರಾಗಲಿದೆ ಮತ್ತು ಒಳ್ಳೆಯ ವಿಚಾರಗಳು ನಿಮ್ಮ ಬದುಕಿನಲ್ಲಿ ನಡೆಯುತ್ತದೆ.
 
6. ಕನ್ಯಾ: ಈ ರಾಶಿಯವರಿಗೆ ಈ ಗ್ರಹಣದಿಂದ ಲಾಭವೂ ಇಲ್ಲ. ನಷ್ಟವೂ ಇಲ್ಲ. ಅಂದರೆ ಈ ಗ್ರಹಣವು ಈ ರಾಶಿಯವರಿಗೆ ಮಿಶ್ರ ಫಲವನ್ನು ನೀಡುತ್ತದೆ. ಆದರೆ ವೃಥಾ ಚಿಂತೆ ಮಾಡುವ ಸಂದರ್ಭ ಎದುರಾಗಬಹುದು. ಆದರೆ ಚಿಂತೆಯ ಕಾರಣಗಳು ಕ್ಷುಲ್ಲಕವಾಗಿರುತ್ತದೆ.
 
7. ತುಲಾ: ಈ ರಾಶಿಯವರು ಅವರ ಕೆಲಸಗಳನ್ನು ನೋಡಿಕೊಂಡು ಅವರ ಪಾಡಿಗೆ ಇರುವುದು ಉತ್ತಮ ಎಂದು ಹೇಳಬಹುದು. ಆ ಗ್ರಹಣವು ಇವರಿಗೆ ಮಿಶ್ರ ಫಲವನ್ನು ತಂದುಕೊಡುತ್ತದೆ. ಎಲ್ಲರೂ ಸ್ನೇಹಿತರೆಂಬ ಧೋರಣೆಯಿಂದ ಎಲ್ಲಾ ವಿಚಾರಕ್ಕೂ ಮೂಗು ತೂರಿಸುವುದು ಉತ್ತಮವಲ್ಲ. 
 
8. ವೃಶ್ಚಿಕ: ಈ ರಾಶಿಯವರಿಗೆ ಗ್ರಹಣವು ಶುಭಫಲವನ್ನು ತಂದುಕೊಡುತ್ತದೆ. ನೀವು ಲಾಭದ ನಿರೀಕ್ಷೆಯಲ್ಲಿದ್ದರೆ ಅದೂ ಕೂಡಾ ನೆರವೇರುವ ಸಾಧ್ಯತೆ ಇದೆ. ಸಾಡೇಸಾತ್ ನಡೆಯುತ್ತಿದ್ದರೂ ಈ ಗ್ರಹಣದಿಂದ ಬಪಳ ಅನುಕೂಲಕರವಾದ ವಾತಾವರಣವಿದೆ.
 
9. ಧನು: ಈ ರಾಶಿಯವರು ಜಾಗರೂಕರಾಗಿರುವುದು ಉತ್ತಮ. ನಿಮಗೆ ಎರಡನೇ ಸ್ಥಾನದಲ್ಲಿ ಗ್ರಹಮ ನಡೆಯುವುದರಿಂದ ಹಣಕಾಸಿನ ವಿಚಾರದಲ್ಲಿ ನಷ್ಟವಾಗುವ ಸಂಭವವಿದೆ. ಆದ್ದರಿಂದ ಯಾವುದೇ ರೀತಿಯ ಹೂಡಿಕೆಯನ್ನು ಈ ಸಂದರ್ಭದಲ್ಲಿ ಮಾಡುವುದು ಬೇಡ.
 
10. ಮಕರ: ನಿಮ್ಮ ರಾಶಿಯಲ್ಲೇ ಗ್ರಹವು ನಡೆಯುವುದರಿಂದ ನೀವು ಬಹಳ ಜಾಗರೂಕರಾಗಿರುವುದು ಉತ್ತಮ. ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ತೀರಾ ಅನಿವಾರ್ಯ ಎಂದಾದಲ್ಲಿ ಮಾತ್ರ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ವಾಹನ ಚಾಲನೆ ಮಾಡುವುದು ಒಳ್ಳೆಯದು.
 
11. ಕುಂಭ: ಈ ರಾಶಿಯವರಿಗೆ ಗ್ರಹಣವು ಅಶುಭ ಫಲವನ್ನು ನೀಡುತ್ತಿದೆ. ಈ ರಾಶಿಯವರು ಆದಷ್ಟು ಆರೋಗ್ಯದ ಬಗ್ಗೆ ಎಚ್ಚರದಿಂದ ಇರುವುದು ಉತ್ತಮ. ಅದರಲ್ಲೂ ನಾಲಿಗೆಯು ಹತೋಟಿಯಲ್ಲಿರುವುದು ಉತ್ತಮ.
 
12. ಮೀನ: ನೀರಿನಲ್ಲಿ ಮೀನಿನ ಹೆಜ್ಜೆ ಕಾಣಿಸುವುದಿಲ್ಲ ಎಂಬಂತೆ ಈ  ರಾಶಿಯವರಿಗೆ ಈ ಗ್ರಹಣದಿಂದ ಎಲ್ಲಿಯೂ ನಷ್ಟವು ಕಾಣಿಸುತ್ತಿಲ್ಲ. ವ್ಯಾಪಾರದಲ್ಲಿ, ಭೂಮಿ, ವಸ್ತು, ವ್ಯಕ್ತಿಗಳಿಂದ ಹೀಗೆ ಎಲ್ಲದರಲ್ಲಿಯೂ ಈ ಕೇತುಗ್ರಸ್ಥ ಚಂದ್ರಗ್ರಹಣದಿಂದ ಲಾಭವೇ ಕಾಣಿಸುತ್ತಿದೆ.
webdunia
** ಗ್ರಹಣದ ಪ್ರಭಾವ ಎಷ್ಟು ದಿನ?
 
ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟ ಕೆಲಸಕ್ಕೆ ಕೆಟ್ಟ ಫಲ. ಹೀಗೆ ಎಲ್ಲದಕ್ಕೂ ಅದರದ್ದೇ ಆದ ಫಲಗಳು ಇದ್ದೇ ಇರುತ್ತವೆ. ಈ ಗ್ರಹಣದ ಪ್ರಭಾವವು ಎರಡು ತಿಂಗಳ ಕಾಲ ಇರುತ್ತದೆ. ಒಳ್ಳೆ ಫಲಗಳು ಏಕೆ ಸಿಗಲಿಲ್ಲ ಎಂದು ಯೋಚಿಸುವ ಅಗತ್ಯವಿಲ್ಲ. ಕೆಡುಕಾಯಿತೆಲ್ಲ ಎಂದು ಚಿಂತೆ ಮಾಡುವುದೂ ಕೂಡಾ ಅಗತ್ಯವಿಲ್ಲ. ಹಾಗೆಯೇ ಮಿಶ್ರ ಫಲದವರು ಹೊಸ ಸಾಹಸಕ್ಕೆ ಕೈ ಹಾಕುವುದೂ ಸಹ ಬೇಡ. ಗ್ರಹಣವನ್ನು ಎಲ್ಲಾ ವರ್ಗದವರೂ ಆಚರಿಸಲೇಬೇಕು. ಅದರೆ ಗ್ರಹಣದ ಕಾಲದಲ್ಲಿ ಒಳ್ಳೆಯ ಚಿಂತನೆಗಳನ್ನು ಮಾಡುತ್ತಾ ಪೂಜೆ- ಪುನಸ್ಕಾರಗಳನ್ನು ಮಾಡುತ್ತಾ, ಕಟ್ಟುನಿಟ್ಟಾದ ಆಚರಣೆಯೊಂದಿಗೆ ಆಚರಿಸಿ ನಿಮ್ಮ ಇಷ್ಟಾರ್ಥವನ್ನು ಸಿದ್ಧಿಸಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಖಗ್ರಾಸ ಚಂದ್ರಗ್ರಹಣದ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ