ಬೆಂಗಳೂರು: ಇಂದು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಅಚರಿಸಲಾಗುತ್ತಿದ್ದು, ಇದನ್ನು ಹೆಂಗಳೆಯರ ಹಬ್ಬವೆಂದೇ ಪರಿಗಣಿಸಲಾಗುತ್ತದೆ. ಆದರೆ ವರಮಹಾಲಕ್ಷ್ಮಿ ಹಬ್ಬದ ವ್ರತವನ್ನು ಪುರುಷರು ಮಾಡಬಾರದೇ?
ವರಮಹಾಲಕ್ಷ್ಮಿ ಹಬ್ಬ ಶ್ರಾವಣ ಮಾಸದ ಮೊದಲ ಅದ್ಧೂರಿ ಹಬ್ಬ. ಇದಕ್ಕೆ ಮೊದಲು ನಾಗರಪಂಚಮಿ, ಭೀಮನ ಅಮವಾಸ್ಯೆ ಬಂದರೂ ಅದು ಚಿಕ್ಕದಾಗಿ ಬಂದು ಹೋಗುತ್ತದೆ. ಆದರೆ ಶ್ರಾವಣ ಮಾಸದ ಪ್ರಮುಖ ಹಬ್ಬವೆಂದರೆ ವರಮಹಾಲಕ್ಷ್ಮಿ ಹಬ್ಬ ಎಂದೇ ಜನಜನಿತವಾಗಿದೆ.
ವರಮಹಾಲಕ್ಷ್ಮಿ ಹಬ್ಬದಲ್ಲಿ ಲಕ್ಷ್ಮೀ ದೇವಿಯ ಆರಾಧನೆ ಮಾಡಲಾಗುತ್ತದೆ. ಲಕ್ಷ್ಮೀ ದೇವಿಯ ಪ್ರಿಯವಾದ ಶುಕ್ರವಾರದಂದೇ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಮುಖ್ಯವಾಗಿ ಉಪವಾಸ ವ್ರತ ಮಾಡಿ ಲಕ್ಷ್ಮೀ ದೇವಿಯ ಕಲಶವಿಟ್ಟು ಪೂಜೆ ಮಾಡುವುದು ರೂಢಿ.
ಹಾಗಾದರೆ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರಿಗೆ ಮಾತ್ರವೇ ಸೀಮಿತವೇ? ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಮಹಿಳೆಯರೇ ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಹಾಗಂತ ಇದು ಕೇವಲ ಮಹಿಳೆಯರಿಗೆ ಸೀಮಿತವಾದ ಹಬ್ಬ ಎಂದರ್ಥವಲ್ಲ. ಈ ಹಬ್ಬದಲ್ಲಿ ಪುರುಷರೂ ಉಪವಾಸ ವ್ರತ ಮಾಡಿ ಲಕ್ಷ್ಮೀ ದೇವಿಯ ಪೂಜೆ ಮಾಡಬಹುದಾಗಿದೆ.