Select Your Language

Notifications

webdunia
webdunia
webdunia
webdunia

ಉಪ್ಪಿ 'ಸೂಪರ್' ಡಿ.3ಕ್ಕೆ ತೆರೆಗೆ; ಇಲ್ಲಿದೆ ಫೋಟೋ ಗ್ಯಾಲರಿ

ಉಪ್ಪಿ 'ಸೂಪರ್' ಡಿ.3ಕ್ಕೆ ತೆರೆಗೆ; ಇಲ್ಲಿದೆ ಫೋಟೋ ಗ್ಯಾಲರಿ
PR
ಉಪೇಂದ್ರ ಬರೋಬ್ಬರಿ ಹತ್ತು ವರ್ಷಗಳ ನಂತರ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷೆಯ 'ಸೂಪರ್' ಚಿತ್ರ ಇದೇ ಡಿಸೆಂಬರ್ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.

ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಅಶೋಕ್ ಕಶ್ಯಪ್ ಕ್ಯಾಮರಾ ಹಿಡಿದಿದ್ದಾರೆ. ವಿ. ಹರಿಕೃಷ್ಣ ಅವರದ್ದು ಸಂಗೀತ. ಯೋಗರಾಜ್ ಭಟ್, ವಿ. ಮನೋಹರ್ ಮತ್ತು ಸ್ವತಃ ಉಪೇಂದ್ರ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ನಯನತಾರಾ ಮತ್ತು ತುಲಿಪ್ ಜೋಷಿ ನಾಯಕಿಯರಾಗಿರುವ ಚಿತ್ರದ ಕನ್ನಡ ಮತ್ತು ತೆಲುಗು ಆವೃತ್ತಿಗಳು ಡಿಸೆಂಬರ್ 3ರಂದು ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಬಿಡುಗಡೆಯಾಗಲಿವೆ. ತೆಲುಗು ಆವೃತ್ತಿ ವಿದೇಶದಲ್ಲಿ ಅದೇ ದಿನ ಬಿಡುಗಡೆಯಾಗುತ್ತಿದೆ.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..

webdunia
PR

ಕಥೆ ಬಿಟ್ಟುಕೊಟ್ಟಿಲ್ಲ...
ಸೂಪರ್ ಚಿತ್ರದ ಕಥೆಯೇನು ಎಂದು ಇದುವರೆಗೂ ಉಪೇಂದ್ರ ಎಲ್ಲೂ ಬಾಯ್ಬಿಟ್ಟಿಲ್ಲ. ತಾನು ಈ ಹಿಂದೆ ಯಾವುದೇ ಚಿತ್ರದಲ್ಲೂ ಕಥೆಯನ್ನು ಹೇಳಿಲ್ಲ. ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ, ಆಗ ಕಥೆ ಏನೆಂಬುದು ನಿಮಗೆ ತಿಳಿಯುತ್ತದೆ ಎಂದು ಉಪ್ಪಿ ಹೇಳಿದ್ದಾರೆ.

ಅದೇ ಹೊತ್ತಿಗೆ ಹೆಚ್ಚು ನಿರೀಕ್ಷೆಗಳನ್ನು ಕೂಡ ಇಟ್ಟುಕೊಳ್ಳದಿರಿ ಎಂದು ಅಭಿಮಾನಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ. ನಿರಾಳರಾಗಿ ಚಿತ್ರಮಂದಿರಕ್ಕೆ ಬನ್ನಿ. ನೀವು ನೀಡುವ ಅಭಿಪ್ರಾಯಗಳನ್ನು ಧನಾತ್ಮಕವಾಗಿ ಸ್ವೀಕರಿಸುತ್ತೇನೆ. ಕೆಟ್ಟದಾಗಿದೆ ಎಂದು ನೀವು ಹೇಳಿದರೂ ನಾನು ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಉಪೇಂದ್ರ ನಿರೀಕ್ಷಣಾ ಜಾಮೀನು ಕೂಡ ಪಡೆದುಕೊಂಡಿದ್ದಾರೆ.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ಮತ್ತೆ ಸ್ತ್ರೀಯರಿಗೆ ಬೈಯ್ತಾರಾ?
ಇಂತಹ ಕುತೂಹಲ ಉಪ್ಪಿ ಅಭಿಮಾನಿಗಳಿಗೆ ಇದ್ದದ್ದೇ. ಈ ಹಿಂದಿನ ತನ್ನ ನಿರ್ದೇಶನ ಎ ಮತ್ತು ಉಪೇಂದ್ರ ಚಿತ್ರಗಳಲ್ಲಿ ಮಹಿಳಾ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಉಪೇಂದ್ರ ಮತ್ತೆ ಅದೇ ಬೂಟುಗಳಿಗೆ ಕಾಲು ತೂರಿದ್ದಾರೆಯೇ ಎಂಬುದನ್ನು ಚಿತ್ರ ಬಿಡುಗಡೆಯಾದ ನಂತರವಷ್ಟೇ ತಿಳಿಯಬೇಕಿದೆ.

ಆದರೂ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಅಂಶಗಳು ಚಿತ್ರದಲ್ಲಿರುವುದಿಲ್ಲ. ಅಷ್ಟಕ್ಕೂ ನಾನು ನಮ್ಮ ಸಮಾಜದಲ್ಲಿ ಇರದ ವಿಚಾರಗಳನ್ನು ತೋರಿಸುತ್ತಿಲ್ಲ. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುತ್ತಿದ್ದೇನೆ. ಅದರ ಉದ್ದೇಶ ಅವುಗಳು ನಾಶವಾಗಬೇಕು ಎನ್ನುವುದು ನಿರ್ದೇಶಕನ ಜಾಣ ಮಾತು.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ಹಾಡುಗಳು ಅಷ್ಟಕಷ್ಟೇ, ನಿಜಾನಾ?
ಸೂಪರ್ ಚಿತ್ರದ ಹಾಡುಗಳ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಉಪ್ಪಿ ನಿರಾಸೆ ಮೂಡಿಸಿದ್ದಾರೆ. ಸೂಪರ್ ಚಿತ್ರದ ಒಂದು ಹಾಡು ಬಿಟ್ಟರೆ ಉಳಿದವು ತಕ್ಷಣಕ್ಕೆ ಮತ್ತೆ ಕೇಳಬೇಕು ಎಂದೆನಿಸುವುದಿಲ್ಲ. ಈ ವಿಚಾರದಲ್ಲಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ವಿಫಲರಾಗಿದ್ದಾರೆ.

ಚಿತ್ರದಲ್ಲಿರುವುದು ಒಟ್ಟು ಐದು ಹಾಡುಗಳು. ಅದರಲ್ಲಿ 'ಕಾಯಿ ಕಾಯಿ ಉಪ್ಪಿನಕಾಯಿ' ಎಂಬ ಹಾಡೊಂದು ಮಾತ್ರ ಗಮನ ಸೆಳೆಯುತ್ತದೆ. ಉಳಿದ ಹಾಡುಗಳು ಉಪ್ಪಿನಕಾಯಿಯೆಂಬ ಭಾವನೆ ಬರುತ್ತಿಲ್ಲ. ಇದನ್ನು ಚಿತ್ರದ ಕಥೆ ಮತ್ತು ನಿರೂಪನೆಯಲ್ಲಿ ಉಪ್ಪಿ ಮರೆಸಲಿದ್ದಾರೆಯೇ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ಭರ್ಜರಿ ಬಜೆಟ್ ಚಿತ್ರವಿದು...
ಹೌದು, ಏಕಕಾಲಕ್ಕೆ ಕನ್ನಡ ಮತ್ತು ತೆಲುಗು ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿರುವ 'ಸೂಪರ್' ಕನ್ನಡದ ಮಟ್ಟಿಗೆ ಬಿಗ್ ಬಜೆಟ್ ಚಿತ್ರ. ಬರೋಬ್ಬರಿ 10 ಕೋಟಿ ರೂಪಾಯಿಗಳನ್ನು ಉಪ್ಪಿಯನ್ನು ನಂಬಿ ರಾಕ್‌ಲೈನ್ ಸುರಿದಿದ್ದಾರೆ.

ಆರಂಭದಲ್ಲಿ ಹಿಂದಿ ಮತ್ತು ತಮಿಳು ಭಾಷೆಗಳಲ್ಲೂ ಚಿತ್ರ ಬಿಡುಗಡೆಯಾಗುತ್ತದೆ ಎಂದು ಜಾಹೀರಾತುಗಳಲ್ಲಿ ಪ್ರಕಟಿಸಲಾಗಿತ್ತು. ಈ ಎರಡು ಭಾಷೆಗಳ ಬಗ್ಗೆ ಚಿತ್ರತಂಡವೀಗ ಸುಮ್ಮನಿದೆ. ಕನ್ನಡ ಮತ್ತು ತೆಲುಗುಗಳಲ್ಲಿ ಸಿಗುವ ಪ್ರತಿಕ್ರಿಯೆಯನ್ನು ನೋಡಿದ ನಂತರ ಇತರ ಭಾಷೆಗಳಿಗೆ ಡಬ್ ಮಾಡುವ ಕುರಿತು ಯೋಚನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ಉಪ್ಪಿ ನಿರ್ದೇಶನ ಬೊಂಬಾಟ್...
ಉಪೇಂದ್ರ ಇದುವರೆಗೆ ನಿರ್ದೇಶಿಸಿದ ಯಾವ ಚಿತ್ರಗಳೂ ಬೋರ್ ಹೊಡೆಸಿಲ್ಲ ಎನ್ನುವುದು ಗಮನಾರ್ಹ. ಅವರು ಮೊತ್ತ ಮೊದಲು ನಿರ್ದೇಶನಕ್ಕೆ ಕೈ ಹಾಕಿದ್ದು 1992ರಲ್ಲಿ. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದ ಜಗ್ಗೇಶ್ ಅವರನ್ನು ಹಾಕಿಕೊಂಡು 'ತರ್ಲೆ ನನ್ಮಗ' ಚಿತ್ರವನ್ನು ನಿರ್ದೇಶಿಸಿದ್ದರು. ಆ ದಿನಗಳಲ್ಲೇ ಇದು 150 ದಿನಗಳನ್ನು ಪೂರೈಸಿತ್ತು.

ಬಳಿಕ ಕುಮಾರ್ ಗೋವಿಂದ್ ನಾಯಕರಾಗಿದ್ದ 'ಶ್' ಚಿತ್ರ ತೆರೆಗೆ (1993) ಬಂದಿತ್ತು. ಇದು ಇಡೀ ಭಾರತೀಯ ಚಿತ್ರರಂಗದಲ್ಲೇ ಭಿನ್ನ ಚಿತ್ರ ಎಂದು ಹೆಸರು ಪಡೆಯಿತು. ಬರೋಬ್ಬರಿ 250 ದಿನಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆಯಿತು.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ಶಿವಣ್ಣನಿಗೆ ಮರುಜನ್ಮ...
ಮರ ಸುತ್ತುವ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ಶಿವರಾಜ್ ಕುಮಾರ್‌ಗೆ ಬಿಗ್ ಬ್ರೇಕ್ ನೀಡಿದ್ದು 'ಓಂ'. ಉಪೇಂದ್ರ ನಿರ್ದೇಶನದ ಮೂರನೇ ಚಿತ್ರವಿದು. ನೈಜ ರೌಡಿಗಳನ್ನೇ ಹಾಕಿಕೊಂಡು ಮಾಡಲಾಗಿದ್ದ ಈ ಚಿತ್ರ (1994) ಐದು ವರ್ಷಗಳ ಕಾಲ ನಿರಂತರ ಪ್ರದರ್ಶನ ಕಂಡಿತ್ತು. ಈಗಲೂ ಇದರ ಸ್ಯಾಟಲೈಟ್ ಹಕ್ಕುಗಳನ್ನು ವಜ್ರೇಶ್ವರಿ ಕಂಬೈನ್ಸ್ ಮಾರಾಟ ಮಾಡಿಲ್ಲ.

ಬೆಂಗಳೂರು ಭೂಗತ ಜಗತ್ತಿನ ಬಗ್ಗೆ ಬೆಳಕು ಚೆಲ್ಲಿದ ಮೊದಲ ಚಿತ್ರ ಎಂಬ ಖ್ಯಾತಿಯೂ 'ಓಂ' ಚಿತ್ರದ್ದು. ಇದೇ ಚಿತ್ರವನ್ನು ಆಧಾರವಾಗಿಟ್ಟುಕೊಂಡು ನಂತರ ಡಜನ್‌ಗಟ್ಟಲೆ ಚಿತ್ರಗಳು ಬಂದು ಹೋಗಿರುವುದು ಕೂಡ ಮಹತ್ವದ ಅಂಶ. ಪ್ರೇಮಾ ನಾಯಕಿಯಾಗಿದ್ದ ಈ ಚಿತ್ರಕ್ಕೆ ಹಿಟ್ ಸಂಗೀತ ನೀಡಿದ್ದು ಹಂಸಲೇಖ.

ಈ ಚಿತ್ರ ಹಿಂದಿಗೆ 'ಅರ್ಜುನ್ ಪಂಡಿತ್', ತೆಲುಗಿಗೆ 'ಓಂಕಾರಂ' ಹೆಸರಿನಲ್ಲಿ ರೀಮೇಕ್ ಆಗಿತ್ತು. ನಂತರ ಬಂದ ಬಾಲಿವುಡ್‌ನ 'ಸತ್ಯ' ಚಿತ್ರದಲ್ಲೂ ಓಂ ಚಿತ್ರದ ಛಾಯೆಯಿತ್ತು.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ನಾಯಕನಾದ ಉಪೇಂದ್ರ...
ಓಂ ಚಿತ್ರದ ಬಳಿಕ (1995) ಉಪ್ಪಿ ಕೈಗೆತ್ತಿಕೊಂಡದ್ದು 'ಅಂತ' ಚಿತ್ರದ ಎರಡನೇ ಭಾಗ 'ಆಪರೇಷನ್ ಅಂತ'. ಸಾಕಷ್ಟು ಗೋಜಲುಗಳ ಕಾರಣದಿಂದ ಈ ಚಿತ್ರ ಫ್ಲಾಪ್ ಆಗಿತ್ತು. ಅಂಬರೀಷ್ ಈ ಚಿತ್ರದಲ್ಲೂ ನಾಯಕರಾಗಿದ್ದರು.

ಬಳಿಕ (1998) ಉಪ್ಪಿ ಸ್ವತಃ ತಾನೇ ನಾಯಕನಾಗಿ ತೆಗೆದ ಮೊದಲ ಚಿತ್ರ 'ಎ'. ಚಾಂದಿನಿ ನಾಯಕಿಯಾಗಿದ್ದರು. ಪ್ರೀತಿಯ ಬಗ್ಗೆ ಭಿನ್ನ ದೃಷ್ಟಿಕೋನಗಳನ್ನು, ಚಿತ್ರರಂಗದ ಮಾಮೂಲಿ ಸೂತ್ರಗಳನ್ನು ಧಿಕ್ಕರಿಸಿ ತೆಗೆದ ಸಿನಿಮಾ ಭಾರೀ ಜನಪ್ರಿಯತೆ ಗಳಿಸಿತ್ತು.

ಗುರುಕಿರಣ್ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ಮೊದಲ ಚಿತ್ರವೂ ಇದೇ. ಹಾಡುಗಳಂತೂ ಸೂಪರ್ ಹಿಟ್ ಆಗಿದ್ದವು. ಈ ಚಿತ್ರ ತೆಲುಗಿಗೆ ಇದೇ ಹೆಸರಿನಲ್ಲಿ ಡಬ್ ಆಗಿತ್ತು. ಇತ್ತೀಚೆಗಷ್ಟೇ ಇದು 'ಅಡವಾದಿ' ಎಂಬ ಹೆಸರಿನಲ್ಲಿ ತಮಿಳಿಗೆ ರಿಮೇಕ್ ಆಗಿತ್ತು.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ಸ್ವಸ್ತಿಕ್ ವಿಭಿನ್ನವಾದರೂ ಫ್ಲಾಪ್...
ಆಪರೇಷನ್ ಅಂತ ಫ್ಲಾಪ್ ಆದ ನಂತರ ಎದುರಾದ ಮತ್ತೊಂದು ಸೋಲು ಸ್ವಸ್ತಿಕ್. ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ನಾಯಕರನ್ನಾಗಿ ಮಾಡಿಕೊಂಡು ಉಪೇಂದ್ರ ನಿರ್ದೇಶಿಸಿದ್ದರು.

ಭಯೋತ್ಪಾದನೆ ಮತ್ತು ಪ್ರೀತಿಯನ್ನು ಮಿಶ್ರಣ ಮಾಡಿ ಮಾಡಲಾಗಿದ್ದ ಸಿನಿಮಾವಿದು. ಅತ್ಯುತ್ತಮ ಕಥೆ ಮತ್ತು ನಿರೂಪನೆಯನ್ನು ಹೊಂದಿದ್ದರೂ, ಪ್ರೇಕ್ಷಕರು ಚಿತ್ರಮಂದಿರದತ್ತ ಬಂದಿರಲಿಲ್ಲ. ರಾಘಣ್ಣ ಗಡ್ಡಧಾರಿಯಾಗಿ ಗಮನ ಸೆಳೆದಿದ್ದ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು.

ಮುಂದಿನ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ಕೊನೆಯ ಚಿತ್ರ ಉಪೇಂದ್ರ...
ಮಾನಸಿಕ ತುಮುಲತೆಯನ್ನು ಪಾತ್ರವೊಂದರ (2000) ಮೂಲಕ ಹೇಳುವ ಚಿತ್ರ, ತನ್ನದೇ ಹೆಸರಿನ 'ಉಪೇಂದ್ರ'. ಸ್ತ್ರೀವಾದಿಗಳಿಂದ ತೀವ್ರ ಪ್ರತಿಭಟನೆಯನ್ನೂ ಈ ಚಿತ್ರ ಎದುರಿಸಿತ್ತು. ಆದರೂ ಉಪ್ಪಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದ ಚಿತ್ರ ಇದಾಗಿತ್ತು.

ಗುರುಕಿರಣ್ ಸಂಗೀತದಲ್ಲಿ ಮೂಡಿ ಬಂದಿದ್ದ ಹಾಡುಗಳಂತೂ ಪಡ್ಡೆಗಳನ್ನು ತೇಲಿಸಿತ್ತು. ಪ್ರೇಮಾ, ರವೀನಾ ಟಂಡನ್ ಮತ್ತು ಧಾಮಿನಿ ಚಿತ್ರದ ನಾಯಕಿಯರಾಗಿದ್ದರು.

ಕುಟುಂಬ ಸಮೇತರಾಗಿ ನೋಡುವ ಚಿತ್ರವಲ್ಲ ಎಂಬ ಹಣೆಪಟ್ಟಿ ಕಟ್ಟಿಕೊಂಡರೂ, ಹೀಗೂ ಸಿನಿಮಾ ಮಾಡಬಹುದು ಎಂದು ಉಪೇಂದ್ರ ಹತ್ತು ವರ್ಷಗಳ ಹಿಂದೆ ತೋರಿಸಿ ಕೊಟ್ಟಿದ್ದರು.

ಕೊನೆಯ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ..


webdunia
PR

ರಿಮೇಕ್‌ಗಳಲ್ಲಿ ಕಳೆದು ಹೋದರು...
ಉಪ್ಪಿ ಕೊನೆಯದಾಗಿ ನಿರ್ದೇಶಿಸಿದ ಚಿತ್ರ ಉಪೇಂದ್ರ. ಆ ಬಳಿಕ ನಿರ್ದೇಶನಕ್ಕೆ ಗುಡ್‌ಬೈ ಹೇಳಿ ಸಿಕ್ಕಸಿಕ್ಕವರ ಚಿತ್ರಗಳಲ್ಲಿ ಹಣದಾಸೆಗೆ ನಟಿಸುತ್ತಾ ಬಂದವರು. ಕೆಲವೊಂದು ಹಿಟ್ ಚಿತ್ರಗಳನ್ನು ನೀಡಿದರೂ, ರಿಮೇಕ್‌ನಲ್ಲಿ ಮುಳುಗಿ ಹೋಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಗಳು ಬಂದರೂ ತಲೆ ಕೆಡಿಸಿಕೊಳ್ಳಲಿಲ್ಲ.

ಈ ನಡುವೆ ಕೆಲವು ಡಮ್ಮಿ ನಿರ್ದೇಶಕರನ್ನು ಇಟ್ಟುಕೊಂಡು, ತನ್ನದೇ ಆಲೋಚನೆಗಳನ್ನು ರಿಮೇಕ್ ಚಿತ್ರಗಳಲ್ಲಿ ತೂರಿಸಿದ ಆಪಾದನೆಗಳನ್ನೂ ಉಪ್ಪಿ ಎದುರಿಸಿದರು. ಎಚ್2ಓ, ಸೂಪರ್‌ಸ್ಟಾರ್, ರಕ್ತಕಣ್ಣೀರು, ಬುದ್ಧಿವಂತ ಚಿತ್ರಗಳು ಇಂತಹ ಆರೋಪಗಳಿಗೆ ಗುರಿಯಾದವು.

ಇತ್ತೀಚಿನ ವರ್ಷಗಳಲ್ಲಿ ನಿರಂತರ ಫ್ಲಾಪ್‌ಗಳನ್ನು ಕಂಡ ಉಪೇಂದ್ರ ಕೊನೆಗೂ 10 ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಉಪ್ಪಿ ತಲೆಯಲ್ಲೀಗ ಏನೂ ಇಲ್ಲ, ಖಾಲಿಯಾಗಿದೆ ಎಂಬ ಆರೋಪಗಳಿಗೆ ಅವರು ಹೇಗೆ ಉತ್ತರಿಸಿದ್ದಾರೆ ಎಂಬುದು ಡಿಸೆಂಬರ್ 3ರಂದು ಬಹಿರಂಗವಾಗಲಿದೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada