ಬೆಂಗಳೂರು : ಕೊರೊನಾ 4ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸದ್ಯಕ್ಕೆ ಟಫ್ ರೂಲ್ಸ್ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಅವರೊಂದು ತುರ್ತು ಸಭೆ ಮುಕ್ತಾಯದ ಬಳಿಕ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯದಲ್ಲಿ ಸಾಫ್ಟ್ ರೂಲ್ಸ್ ಮಾತ್ರ ಜಾರಿ ಮಾಡುತ್ತೇವೆ. ಸ್ವಲ್ಪ ದಿನ ಕಾದು ನೋಡುವ ಬಗ್ಗೆ ಚಿಂತನೆ ನಡೆಸಿದ್ದೇವೆ.
ಕೇಂದ್ರದಿಂದ ಯಾವುದೇ ನಿಯಮ ಜಾರಿಗೆ ಸೂಚನೆ ಬಾರದ ಹಿನ್ನಲೆ ಸದ್ಯಕ್ಕೆ ಕಠಿಣ ನಿಯಮ ಜಾರಿ ಮಾಡದೇ ಇರಲು ನಿರ್ಧಾರ ಮಾಡಿದ್ದೇವೆ ಎಂದರು. ಪ್ರಧಾನಿಗಳ 3ಟಿ ಸೂತ್ರ ಅಳವಡಿಕೆಗೆ ನಿರ್ಧರಿಸಿದ್ದು, ರಾಜ್ಯದಲ್ಲಿ ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್ ಸೂತ್ರ ಅನುಷ್ಠಾನ ಆಗಲಿದೆ. ಇದರ ಜೊತೆಗೆ ಲಸಿಕೆ ಅಭಿಯಾನ ಚುರುಕು ಮಾಡುತ್ತೇವೆ.
ಹಾಗೆಯೇ ಮಕ್ಕಳ ಲಸಿಕೆ ಅಭಿಯಾನಕ್ಕೆ ವೇಗ ಕೊಡಲು ನಿರ್ಧಾರ ಮಾಡಿದ್ದೇವೆ. 6 ರಿಂದ 12 ಮತ್ತು 15 ರಿಂದ 18 ಮತ್ತು 60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ವೇಗ ಹೆಚ್ಚಳ ಮಾಡಿತ್ತೇವೆ ಎಂದು ಹೇಳಿದರು.
ಜನರಲ್ಲಿ ಲಸಿಕೆ ಜಾಗೃತಿ, ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇವೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲ ನಿಯಮ ಸೇರ್ಪಡೆ ಮಾಡುತ್ತಿದ್ದೇವೆ. ಅಂತಾರಾಜ್ಯ ಪ್ರಯಾಣಿಕರಿಗೂ ಕೆಲವು ನಿಯಮ ಜಾರಿಗೆ ಸರ್ಕಾರದ ಚಿಂತನೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆ ವ್ಯವಸ್ಥೆ ಬಗ್ಗೆ ಹೇಳಿದ್ದೇವೆ. ಸರ್ಕಾರಿ 50 ಸಾವಿರ ಬೆಡ್, ಖಾಸಗಿ 1 ಲಕ್ಷ ಬೆಡ್ ವ್ಯವಸ್ಥೆ ಮಾಡುತ್ತೇವೆ. ನಾವು ಸನ್ನದ್ಧರಾಗಿದೀವಿ ಅಂತ ಹೇಳಿದ್ದೇವೆ. ಪ್ರಧಾನ ಮಂತ್ರಿಗಳು ಸುದೀರ್ಘವಾಗಿ ರಾಜ್ಯದ ವರದಿ ಬಗ್ಗೆ ಪಡೆದಿದ್ದಾರೆ. ರಾಜ್ಯದ ಸ್ಥಿತಿಗತಿ ಬಗ್ಗೆಯೂ ನಾವು ಹೇಳಿದ್ದೇವೆ. ಸದ್ಯ ಕೋವಿಡ್ ನಿಯಂತ್ರಣದಲ್ಲಿದೆ. ಪ್ರತಿ ದಿನ 30 ಸಾವಿರ ಟೆಸ್ಟ್ ಹೆಚ್ಚಳ ಮಾಡಲು ಕ್ರಮ ವಹಿಸಿದ್ದೇವೆ ಎಂದರು.