ಬೆಂಗಳೂರು, ಸೆ11: ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿಯೂ ಕ್ರಮೇಣವಾಗಿ ಏರಿಕೆಯಾಗಿರುವುದು ಕಂಡುಬಂದಿದೆ. ಮೂರು ತಿಂಗಳಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಆರು ಪಟ್ಟು ಏರಿಕೆಯಾಗಿದೆ. ಮಳೆಗಾಲಕ್ಕೂ ಮುನ್ನ, ಮೇ ತಿಂಗಳಿನಲ್ಲಿ 102 ಡೆಂಗ್ಯೂ ಪ್ರಕರಣಗಳಿದ್ದು, ಆಗಸ್ಟ್ ತಿಂಗಳಿನಲ್ಲಿ 677 ಪ್ರಕರಣಗಳಿಗೆ ಏರಿಕೆಯಾಗಿದೆ.
ಡೆಂಗ್ಯೂ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಆದರೆ ಪರಿಸ್ಥಿತಿ ಆತಂಕಕಾರಿಯಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಎಂಪಿ ಪ್ರಕಾರ, ನಗರದಲ್ಲಿ ಮೇ ತಿಂಗಳಿನಿಂದ ಆಗಸ್ಟ್ವರೆಗೆ 12,203 ಮಾದರಿಗಳ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 1304 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿಯ ಎಂಟು ವಲಯಗಳ ಪೈಕಿ ಪೂರ್ವ ವಲಯದಲ್ಲಿ ಅತಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಪೂರ್ವ ವಲಯದಲ್ಲಿ 438 ಪ್ರಕರಣಗಳಿದ್ದು, ದಕ್ಷಿಣ ವಲಯದಲ್ಲಿ 319 ಪ್ರಕರಣಗಳು ವರದಿಯಾಗಿವೆ.
ಮೇ ತಿಂಗಳಿನಿಂದಲೂ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿದೆ. ಮೇ ತಿಂಗಳಿನಲ್ಲಿ 102 ಇದ್ದ ಡೆಂಗ್ಯೂ ಪ್ರಕರಣಗಳು ಜೂನ್ ತಿಂಗಳಿನಲ್ಲಿ 174 ಪ್ರಕರಣಗಳಿಗೆ ಏರಿಕೆಯಾಗಿದೆ. ಜುಲೈ ತಿಂಗಳಿನಲ್ಲಿ 351 ಪ್ರಕರಣಗಳು ಹಾಗೂ ಆಗಸ್ಟ್ ತಿಂಗಳಿನಲ್ಲಿ 677 ಪ್ರಕರಣಗಳು ದಾಖಲಾಗಿವೆ.
'ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಖಂಡಿತ ಹೆಚ್ಚಳವಾಗಿದೆ. ಅದಾಗ್ಯೂ ಚಿಂತಿಸುವ ಅಗತ್ಯವಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾವು ಮೇಲ್ವಿಚಾರಣೆ ನಡೆಸುತ್ತಿದ್ದೇವೆ ಹಾಗೂ ಎಲ್ಲೆಲ್ಲಿ ಪ್ರಕರಣಗಳು ವರದಿಯಾಗುತ್ತಿವೆಯೋ ಅಲ್ಲಿ ಲಾರ್ವಾ ಉತ್ಪಾದನೆ ತಡೆಯಲು ಫಾಗಿಂಗ್ ಕಾರ್ಯವನ್ನು ತೀವ್ರಗೊಳಿಸಿದ್ದೇವೆ. ಮಳೆಗಾಲದಲ್ಲಿ ಪ್ರಕರಣಗಳು ಹೆಚ್ಚಾಗುವುದು ಸಹಜ' ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ. ವಿಜೇಂದ್ರ ಹೇಳಿದ್ದಾರೆ.
ಡೆಂಗ್ಯೂ ಪರೀಕ್ಷೆಯನ್ನು ಸಮರ್ಥವಾಗಿ ನಡೆಸಲು ಕರ್ನಾಟಕ ಸರ್ಕಾರಕ್ಕೆ ಇಮ್ಯುನೊಗ್ಲೋಬುಲಿನ್ ಎಂ ಪರೀಕ್ಷಾ ಕಿಟ್ಗಳನ್ನು ಕೇಂದ್ರ ಸರ್ಕಾರ ವಿತರಣೆ ಮಾಡಿದೆ. ಈ ಕಿಟ್ಗಳು ಡೆಂಗ್ಯೂ ಪ್ರಕರಣಗಳ ಪತ್ತೆಗೆ ಸಹಕಾರಿಯಾಗಿದ್ದು, ನಿಖರ ಫಲಿತಾಂಶ ನೀಡಲಿದೆ. ಕೊರೊನಾ ಸೋಂಕಿನ ಏರಿಕೆ ಜೊತೆಜೊತೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳಲ್ಲಿ ಡೆಂಗ್ಯೂ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯನ್ನು ತಜ್ಞರು ನೀಡಿದ್ದಾರೆ.