ಬೆಂಗಳೂರು : ನಗರದಲ್ಲಿ ಗುರುವಾರ ಸಂಜೆಯಿಂದ ರಾತ್ರಿಯವರೆಗೆ ಮಳೆ ಅಬ್ಬರಿಸಿ ಸುರಿಯಿತು. ಬಹುತೇಕ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಹರಿಯುವ ನೀರಿನಲ್ಲೇ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದ್ದರಿಂದ, ಸಂಚಾರ ದಟ್ಟಣೆಯೂ ಉಂಟಾಯಿತು.
ಬುಧವಾರವೂ ಮಳೆ ಜೋರಾಗಿತ್ತು. ಗುರುವಾರ ಬೆಳಿಗ್ಗೆಯಿಂದ ಬಿಸಿಲು ಕಾಣಿಸಿಕೊಂಡಿತು. ಮಧ್ಯಾಹ್ನವೇ ಮೋಡ ಕವಿದ ವಾತಾವರಣವಿತ್ತು. ಹಲವೆಡೆ ಮಳೆಯೂ ಸುರಿಯಿತು. ಸಂಜೆಯಾಗುತ್ತಿದ್ದಂತೆ ಮಳೆ ಜೋರಾಯಿತು. ರಾತ್ರಿಯವರೆಗೂ ಮಳೆ ಆರ್ಭಟವಿತ್ತು.
ಮೆಜೆಸ್ಟಿಕ್, ಗಾಂಧಿನಗರ, ಹೆಬ್ಬಾಳ, ಆರ್.ಟಿ.ನಗರ, ಸಂಜಯನಗರ, ಶಿವಾಜಿನಗರ, ಅಶೋಕನಗರ, ಬೈಯಪ್ಪನಹಳ್ಳಿ, ರಾಮಮೂರ್ತಿನಗರ, ಬಾಣಸವಾಡಿ, ಎಚ್ಎಸ್ಆರ್ ಲೇಔಟ್, ಮಡಿವಾಳ, ಕೋರಮಂಗಲ, ಎಂ.ಜಿ. ರಸ್ತೆ, ವಸಂತನಗರ, ಸಂಪಂಗಿರಾಮನಗರ, ಹಲಸೂರು, ಬಸವನಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಹೊಸಕೆರೆಹಳ್ಳಿ, ಯಶವಂತಪುರ, ಪೀಣ್ಯ, ಮಲ್ಲೇಶ್ವರ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಆಯಿತು.
ನಗರದ ಬಹುತೇಕ ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಗಳನ್ನು ಅಗೆಯಲಾಗಿದೆ. ಈ ಜಾಗದಲ್ಲಿದ್ದ ತಗ್ಗುಗಳಲ್ಲಿ ನೀರು ನಿಂತುಕೊಂಡಿತ್ತು. ನಡೆದುಕೊಂಡು ಹೋಗಲು ಪಾದಚಾರಿಗಳಿಗೆ ತೊಂದರೆಯಾಯಿತು.
ಮೆಜೆಸ್ಟಿಕ್, ಕೆ.ಆರ್. ವೃತ್ತ, ಕಾರ್ಪೋರೇಷನ್ ವೃತ್ತ, ಹಳೇ ಮದ್ರಾಸ್ ರಸ್ತೆ, ರಾಜಾಜಿನಗರ ಪಶ್ಚಿಮ ಕಾರ್ಡ್ ರಸ್ತೆ, ಯಶವಂತಪುರ, ಹೊಸೂರು ರಸ್ತೆಯ ಡೈರಿ ವೃತ್ತ ಹಾಗೂ ಲಾಲ್ಬಾಗ್ ಮುಖ್ಯರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು. ಶಿವಾನಂದ ವೃತ್ತದ ರೈಲ್ವೆ ಕೆಳಸೇತುವೆ, ಓಕಳಿಪುರ ಕೆಳ ಸೇತುವೆಗಳಲ್ಲಿ 4 ಅಡಿಯಷ್ಟು ನೀರು ಹರಿಯಿತು.
'ನಗರದ ಬಹುತೇಕ ಕಡೆ ಮಳೆ ಆಗಿದೆ. ಹೆಚ್ಚು ಹಾನಿಯಾದ ಬಗ್ಗೆ ದೂರುಗಳು ಬಂದಿಲ್ಲ' ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.