ಮಾಸ್ಕೋ : ನಿರೀಕ್ಷೆಯಂತೆಯೇ ಉಕ್ರೇನ್ ಮೇಲೆ ರಷ್ಯಾ ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿದೆ.
ಪಾಶ್ಚಿಮಾತ್ಯ ದೇಶಗಳ ಒತ್ತಡದ ನಡುವೆಯೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಗುರುವಾರ 'ಸೇನಾ ಕಾರ್ಯಾಚರಣೆ' ಘೋಷಣೆ ಮಾಡಿದ್ದಾರೆ.
ಉಕ್ರೇನ್ ಸೇನೆಗೆ ಶರಣಾಗುವಂತೆ ಅವರು ಆಗ್ರಹಿಸಿದ್ದಾರೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ತಲ್ಲಣ ಉಂಟಾಗಿದೆ. ಈ ಯುದ್ಧವು ಜಗತ್ತಿನಾದ್ಯಂತ ದೇಶಗಳ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುವ ಭೀತಿ ಇದೆ.
ತಮ್ಮ ಉದ್ದೇಶಗಳನ್ನು ಘೋಷಿಸಲು ಪುಟಿನ್ ಅವರು ಟೆಲಿವಿಷನ್ನಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. "ನಾನು ಸೇನಾ ಕಾರ್ಯಾಚರಣೆ ನಡೆಸಲು ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಅವರು ಮಾಸ್ಕೋದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪ್ರಕಟಣೆ ಹೊರಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಯಾರಾದರೂ ಮಧ್ಯಪ್ರವೇಶ ಮಾಡಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕ ನೇತೃತ್ವದ ನ್ಯಾಟೋ ಮಿತ್ರಕೂಟದ ದೇಶಗಳಿಗೆ ಅವರು ರವಾನಿಸುವ ಎಚ್ಚರಿಕೆಯ ಸಂದೇಶವಾಗಿದೆ.
ಉಕ್ರೇನ್ ಸೇನೆಯು ತನ್ನ ಶಸ್ತಾಸ್ತ್ರಗಳನ್ನು ಕೆಳಕ್ಕಿಳಿಸಬೇಕು ಎಂದು ವ್ಲಾಡಿಮಿರ್ ಪುಟಿನ್ ಸಂದೇಶ ನೀಡಿದ್ದಾರೆ. ಪೂರ್ವ ಉಕ್ರೇನ್ನಲ್ಲಿನ ಬಂಡುಕೋರ ನಾಯಕರು ಉಕ್ರೇನ್ ವಿರುದ್ಧ ಸೇನಾ ನೆರವು ನೀಡುವಂತೆ ಮಾಸ್ಕೋಗೆ ಮನವಿ ಮಾಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.