ಅಮೃತ್ ಸರ್, ಸೆ 20 : ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬಂದಿತ್ತು.
ಸಿಎಂ ರೇಸಿನಲ್ಲಿ ಮುಂಚೂಣಿಯಲ್ಲಿದ್ದ ಹಿರಿಯ ನಾಯಕಿ ಅಂಬಿಕಾ ಸೋನಿ ತಮಗೆ ಸಿಎಂ ಸ್ಥಾನ ಬೇಡ, ಸಿಖ್ ಸಮುದಾಯವರೇ ಸಿಎಂ ಆಗಲಿ ಎಂದು ಕಾಂಗ್ರೆಸ್ ಹೈಕಮಾಂಡಿಗೆ ತಿಳಿಸಿದ ಬಳಿಕ ಕುತೂಹಲ ಇನ್ನಷ್ಟು ಹೆಚ್ಚಾಗಿತ್ತು. ಸುಖ್ಜಿಂದರ್ ಸಿಂಗ್ ರಾಂಧವ ಇನ್ನೇನು ಸಿಎಂ ಗದ್ದುಗೆಗೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬಿದ ಬೆನ್ನಲ್ಲೇ ಇದೀಗ ಚರಣ್ಜಿತ್ ಸಿಂಗ್ ಛನ್ನಿ ನೂತನ ಸಿಎಂ ಎಂದು ತಿಳಿದು ಬಂದಿದೆ.
ಸಿಖ್ ನಾಯಕರಿಗೆ ಸಿಎಂ ಪಟ್ಟ: ಶನಿವಾರ ನಡೆದ ರಾಜಕೀಯ ಬೆಳವಣಿಗೆಯೊಂದರಲ್ಲಿ ಪಂಜಾಬ್ ಮುಂದಿನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವಂತೆ ಅಂಬಿಕಾ ಸೋನಿಯವರಿಗೆ ಆಫರ್ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ನೀಡಿದ ಆಫರ್ ಅನ್ನು ನಿರಾಕರಿಸಿದ್ದಾರೆ. ಸಿಖ್ ಸಮುದಾಯದ ನಾಯಕನಿಗೆ ಸಿಎಂ ಪಟ್ಟವನ್ನು ಕಟ್ಟದಿದ್ದರೆ ಅದು ಮುಂದಿನ ಚುನಾವಣೆಯಲ್ಲಿ ಅಡ್ಡಪರಿಣಾಮ ಬೀರುವ ಅಪಾಯವಿದೆ ಎಂದು ಅಂಬಿಕಾ ಸೋನಿ ಕೇಂದ್ರ ನಾಯಕರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸೆಪ್ಟೆಂಬರ್ 18ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ಸೇರಿ, ಹೊಸ ಸಿಎಲ್ಪಿ ನಾಯಕನ ಹೆಸರು ಅಂತಿಮಗೊಳಿಸಿದ್ದಾರೆ. ಸಿಎಂ ಆಗಿ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಲಾಗಿದೆ.
ಮೂರು ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿರುವ ಚರಣ್ಜೀತ್ ಅವರು ಪಂಜಾಬ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿಯ ಮಂತ್ರಿಯಾಗಿದ್ದಾರೆ. ಪಂಜಾಬ್ ವಿಧಾನಸಭೆಯಲ್ಲಿ 2015 ರಿಂದ 2016 ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ಚಾಮ್ಕೌರ್ ಸಾಹೀಬ್ ಕ್ಷೇತ್ರದ ಶಾಸಕರಾಗಿರುವ ಚರಣ್ಜೀತ್ ಅವರು ರಾಮ್ ದಾಸಿಯಾ ಸಿಖ್ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಚಮ್ಕೌರ್ ಸಾಹೀಬ್ ಕ್ಷೇತ್ರದ ಮಕ್ರೋನಾ ಕಲನ್ ಎಂಬ ಗ್ರಾಮದವರಾದ ಚರಣ್ಜೀತ್ ಅವರು ನಂತರ ಖರಾರ್ ಕಡೆಗೆ ವಲಸೆ ಬಂದರು. ಮುನ್ಸಿಪಲ್ ಕೌನ್ಸಿಲರ್ ಆಗಿ ಮೂರು ಬಾರಿ ಆಯ್ಕೆಯಾಗಿ ರಾಜಕೀಯದಲ್ಲಿ ಗುರುತಿಸಿಕೊಂಡರು.
ಪಂಜಾಬ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇರುವಾಗಲೇ ನಾಯಕತ್ವದ ಪ್ರಶ್ನೆ ಎದುರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಎನ್ನಬಹುದು. ಹೀಗಾಗಿ ಯುವ ನಾಯಕರೊಬ್ಬರಿಗೆ ಸಿಎಂ ಪಟ್ಟ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂಬ ಸುದ್ದಿಯಿದೆ.
ಮಾಜಿ ಕ್ರಿಕೆಟರ್ ಕಮ್ ರಾಜಕಾರಣಿ ನವಜ್ಯೋತ್ ಸಿಂಗ್ ಸಿಧು ಅಲ್ಲದೆ, ಪಂಜಾಬ್ ಕಾಂಗ್ರೆಸ್ ಪ್ರದೇಶ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಜಾಖರ್, ಪ್ರತಾಪ್ ಬಾಜ್ವಾ ಸದ್ಯಕ್ಕೆ ಸಿಎಂ ಸ್ಥಾನದ ರೇಸಿನಲ್ಲಿ ಮುಂದಿದ್ದಾರೆ ಎಂದು ತಿಳಿದು ಬಂದಿದೆ. ಇವರಲ್ಲದೆ ಸಚಿವರಾದ ಸುಖ್ ಜಿಂದರ್ ರಾಂಧವ, ಸುಖ್ವಿಂದರ್ ಸಿಂಗ್ ಸಕರಿಯಾ. ತೃಪ್ತ್ ರಾಜೀಂದರ್ ಸಿಂಗ್ ಬಾಜ್ವಾ ಕೂಡಾ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದರು. ಬ್ರಹ್ಮ್ ಮೋಹಿಂದ್ರಾ, ವಿಜಯ್ ಇಂದರ್ ಸಿಂಗ್ಲಾ, ಪಂಜಾಬ್ ಕಾರ್ಯಕಾರಿ ಅಧ್ಯಕ್ಷ ಕುಲ್ಜಿ ಸಿಂಗ್ ನಾಗ್ರಾ, ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಹೆಸರು ಕೂಡಾ ಕೇಳಿ ಬಂದಿತ್ತು.
2017ರ ಚುನಾವಣೆಯಲ್ಲಿ ಅಮರೀಂದರ್ ಸಿಂಗ್ ನೇತೃತ್ವ ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಮುಂದಿನ ಚುನಾವಣೆಯನ್ನು ನವಜ್ಯೋತ್ ಸಿಂಗ್ ಸಿಧು ಹಾಗೂ ಚರಣ್ಜೀತ್ ನೇತೃತ್ವದಲ್ಲಿ ಎದುರಿಸಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸುವ ಸಾಧ್ಯತೆಯಿದೆ.