ದಾವಣಗೆರೆ : ಮುಂಬರುವ ಚುನಾವಣೆಗಳನ್ನು ಯಾವ ರೀತಿ ಎದುರಿಸಬೇಕು. ಏನು ರಣತಂತ್ರ ರೂಪಿಸಬೇಕು ಎಂಬ ಬಗ್ಗೆ ದಾವಣಗೆರೆಯಲ್ಲಿ ರವಿವಾರ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆ ನಿಮಿತ್ತ ಶನಿವಾರ ಸಂಜೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಖಾಸಗಿ ಹೋಟೆಲ್ ಸಭಾಭವನದಲ್ಲಿ ಏರ್ಪಡಿಸಿದ್ದ ದೀನ್ದಯಾಳ್, ಅಟಲ್ಜಿ ಹಾಗೂ ಮೋದಿ ಸಾಧನೆ ಕುರಿತ ವರ್ಣಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷವನ್ನು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಇನ್ನಷ್ಟು ಬಲವರ್ಧನೆಗೊಳಿಸಲು ಚಿಂತನೆ ಮಾಡಲಾಗುವುದು. ಇದಲ್ಲದೇ ಪ್ರಸ್ತುತ ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಸಚಿವರಾದ ಆರ್. ಅಶೋಕ್, ಶ್ರೀರಾಮುಲು ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು.