ಬೆಂಗಳೂರು : “ಬಿಜೆಪಿಯ ಸಂಘಟನೆ ಪ್ರಬಲವಾಗಿದೆ ಮತ್ತು ಪಕ್ಷವು ಈಗ 2023 ವಿಧಾನಸಭೆ ಮತ್ತು 2024 ಲೋಕಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ ಮತ್ತು ಗೆಲುವಿನ ವಿಶ್ವಾಸವಿದೆ” ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಜಗನ್ನಾಥ ಭವನದಲ್ಲಿ ಬುಧವಾರ ನಡೆದ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ವಿಜೆತರಾದವರಿಗೆ ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದ ಅವರು, “ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ ಈಗಾಗಲೇ ಗುರುತಿಸಿಕೊಂಡಿದೆ. ಅಲ್ಲಿ ನಾವು ಅತಿದೊಡ್ಡ ಪಕ್ಷವಾಗಿದ್ದೇವೆ. ನಾವು ಅಧ್ಯಕ್ಷ ಸ್ಥಾನವನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗೆಲ್ಲುವತ್ತ ಗಮನ ಹರಿಸಬೇಕು. ದೊಡ್ಡಬಳ್ಳಾಪುರದಲ್ಲಿ ಒಂದು ತಿಂಗಳಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆಯ ಸ್ಥಾಪನೆ ಮಾಡಿದ್ದೇವೆ, ಬಿಎಂಟಿಸಿ ಬಸ್ ಬರುವಲ್ಲಿಯೂ ನನ್ನ ಶ್ರಮ ಇದೆ. ದೊಡ್ಡಬಳ್ಳಾಪುರದ ಅಭಿವೃದ್ಧಿಗೆ ನಾವು ಕಂಕಣ ಬದ್ದರಾಗಿದ್ದೇವೆ” ಎಂದರು.
ದೊಡ್ಡಬಳ್ಳಾಪುರದೊಂದಿಗಿನ ತಮ್ಮ ವಿಶೇಷ ನಂಟನ್ನು ನೆನಪಿಸಿಕೊಂಡ ಆರ್ ಅಶೋಕ್. “ತುರ್ತು ಪರಿಸ್ಥಿತಿ ದಿನಗಳಲ್ಲಿ ನಾನು ಜೈಲು ಸೇರಿದ್ದೆ. ಬಿಡುಗಡೆಯಾದ ನಂತರ ಒಂದು ವರ್ಷ ನನ್ನ ಊರಿನಿಂದ ದೂರ ಉಳಿದಿದ್ದೆ. ಜಾಲಹಳ್ಳಿ ಪೆಟ್ರೋಲ್ ಪಂಪ್ನಲ್ಲಿ ನಾನು ಚೇತಕ್ ಸ್ಕೂಟರ್ಗೆ ಇಂಧನ ತುಂಬುತ್ತಿದ್ದಾಗ, ಪಕ್ಷದ ಹಿರಿಯ ನಾಯಕರು ಭೇಟಿಯಾಗಿ ಪಕ್ಷದ ಮುಖಂಡರ ಬಳಿ ಕರೆದುಕೊಂಡು ಹೋದರು. ನನ್ನನ್ನು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು.
ದೊಡ್ಡಬಳ್ಳಾಪುರದಲ್ಲಿ ನಡೆದ ಪಕ್ಷದ ಸಭೆಯಲ್ಲಿ ನಾನು ಮೊದಲ ಬಾರಿಗೆ ಪದಾಧಿಕಾರಿ ಆಗಿದ್ದೆ. ಅಂದಿನಿಂದ, ಪಕ್ಷವು ನನ್ನ ಕೆಲಸವನ್ನು ಗುರುತಿಸಿ ಹಲವಾರು ಜವಾಬ್ದಾರಿಗಳನ್ನು ನೀಡಿದೆ. ಹಾಗಾಗಿ, ದೊಡ್ಡಬಳ್ಳಾಪುರದೊಂದಿಗಿನ ನನ್ನ ವಿಶೇಷ ಬಾಂಧವ್ಯವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವೆಲ್ಲ ಸೇರಿ ಅಭಿವೃದ್ಧಿ ಮಾಡೋಣ” ಎಂದು ಹೇಳಿದರು.