ಬೆಂಗಳೂರು : ಕೃಷ್ಣಾ ಮೇಲ್ದಂಡೆ 3ನೇ ಹಂತ ಸೇರಿದಂತೆ ಅಂತರರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಸಂಪೂರ್ಣ ಸದ್ಬಳಕೆ ಮತ್ತು ಇದಕ್ಕಾಗಿ ರೂಪಿಸಿದ ಯೋಜನೆಗಳ ಜಾರಿ ನಮ್ಮ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಹತ್ತು ಹೆಜ್ಜೆ ಮುಂದೆ ಇದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಬುಧವಾರ ನಿಯಮ 68ರ ಅಡಿ ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿ ವಿಳಂಬ ಕುರಿತು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಕೃಷ್ಣ ನ್ಯಾಯಾಧೀಕರಣ ತೀರ್ಪಿನಲ್ಲಿ ರಾಜ್ಯಕ್ಕೆ ದೊರೆತ 130 ಟಿಎಂಸಿ ನೀರಿನ ಬಳಕೆಗೆ ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆ ಅಡಿ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಶೀಘ್ರ ಅಧಿಸೂಚನೆ ಹೊರಡಿಸುವಂತೆ ಹಾಗೂ ಸಮಗ್ರ ಯೋಜನಾ ವರದಿ (ಡಿಪಿಆರ್)ಗೆ ಅನುಮೋದನೆ ನೀಡುವಂತೆ ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರು, ಕೇಂದ್ರ ಜಲ ಆಯೋಗದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಸುಪ್ರೀಂ ಕೋರ್ಟ್ ವಕೀಲರೊಂದಿಗೂ ಚರ್ಚಿಸಲಾಗಿದೆ ಎಂದು ಹೇಳಿದರು.
ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ಎರಡು ಬಾರಿ ಪತ್ರ ಕೂಡ ಬರೆಯಲಾಗಿದೆ. ಇದರ ಮೇಕೆದಾಟು, ಮಹದಾಯಿ ಯೋಜನೆಗಳ ಅನುಷ್ಠಾನಕ್ಕೂ ಎಲ್ಲ ರೀತಿಯ ಪ್ರಯತ್ನಗಳು ನಡೆದಿವೆ. ಒಟ್ಟಾರೆಯಾಗಿ ರಾಜ್ಯದ ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಸರ್ಕಾರ ಹತ್ತು ಹೆಜ್ಜೆ ಮುಂದಿದೆ ಎಂದು ಹೇಳಿದರು.
ಆಲಮಟ್ಟಿ ಎತ್ತರ ಹೆಚ್ಚಳ; ಸಮೀಕ್ಷೆ ಸಾಗಿದೆ
ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಒಂದು ಸವಾಲಾಗಿದೆ. ಯಾಕೆಂದರೆ ಇಲ್ಲಿ ಬಹುದೊಡ್ಡ ಪ್ರಮಾಣದ ಅಂದರೆ 1.34 ಲಕ್ಷ ಎಕರೆ ಭೂಮಿ ಸ್ವಾಧೀನ ಆಗಬೇಕಾಗಿದೆ. 2013ರ ಹೊಸ ಭೂಸ್ವಾಧೀನ ಕಾಯಿದೆಯಿಂದ ಭೂಸ್ವಾಧೀನದ ದರ ಹೆಚ್ಚಾಗಿದೆ. ಇದರಿಂದ ಒಟ್ಟು 78 ಸಾವಿರ ಕೋಟಿ ರೂ. ವೆಚ್ಚ ಆಗಲಿದೆ ಎಂದ ಅವರು, ಆಲಮಟ್ಟಿ ಅಣೆಕಟ್ಟೆ 519 ಮೀ.ನಿಂದ 524 ಮೀ.ಗೆಹೆಚ್ಚಿಸುವುದರಿಂದ 188 ಹಳ್ಳಿಗಳು ಬಾಧಿತ ಆಗಲಿವೆ. ಈ ಸಂಬಂಧದ ಸಮೀಕ್ಷೆ ಕಾರ್ಯ ನಡೆದಿದ್ದು, ಯಾವೊಬ್ಬ ಸಂತ್ರಸ್ತರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಜತೆಗೆ ನಾರಾಯಣಪುರ ಬಲದಂಡೆ ಕಾಲುವೆ ಉದ್ದಕ್ಕೂ ಬರುವ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು ಎಂದ ಅವರು, ಆಲಮಟ್ಟಿ ಹಿನ್ನೀರಿನಿಂದ ಮುಧೋಳ ವ್ಯಾಪ್ತಿಯ ಗ್ರಾಮಗಳೂ ಬಾಧಿತ ಆಗಿರುವ ಬಗ್ಗೆ ತಾಂತ್ರಿಕ ತಜ್ಞರಿಂದ ಸಮೀಕ್ಷೆ ನಡೆಸಿ, ಸದನಕ್ಕೆ ವರದಿ ಮಂಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಭದ್ರಾ ಮೇಲ್ದಡೆ; ಶೀಘ್ರ ಸಿಹಿ ಸುದ್ದಿ
ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಕೆಲವೇ ದಿನಗಳಲ್ಲಿ “ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲ್ಪಡಲಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಕೆಲವೇ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ “ರಾಷ್ಟ್ರೀಯ ಯೋಜನೆಯಾಗಿ ಅನುಮೋದನೆಗೊಳ್ಳಲಿದೆ. ನಂತರ ಈ ಸಂಬಂಧ ಆದೇಶವೂ ಹೊರಬೀಳಲಿದೆ ಎಂದರು.