ನವದೆಹಲಿ : ವಿಶ್ವದಲ್ಲಿ ಮೂರನೇ ಅಲೆಯ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.
ಈವರೆಗೂ ಭಾರತದಲ್ಲಿ 200 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 77 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಓಮಿಕ್ರಾನ್ ಸೋಂಕು ಹರಡುತ್ತಿರುವ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ ರಾಜ್ಯವಾರು ಪತ್ತೆಯಾದ ಸೋಂಕಿತರ ಸಂಖ್ಯೆಯನ್ನು ಪ್ರಕಟಿಸಿದೆ.
ಈ ಅಂಕಿ ಅಂಶಗಳ ಪ್ರಕಾರ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು ಎರಡು ರಾಜ್ಯಗಳಲ್ಲಿ ತಲಾ 54 ಪ್ರಕರಣಗಳು ಪತ್ತೆಯಾಗಿವೆ. ತೆಲಂಗಾಣದಲ್ಲಿ 20 ಮಂದಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದ್ದು, ಅದು ಮೂರನೇ ಸ್ಥಾನದಲ್ಲಿದ್ದರೇ ಕರ್ನಾಟಕದಲ್ಲಿ 19 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಪತ್ತೆಯಾದ ಸೋಂಕಿತರ ಪೈಕಿ ಈಗಾಗಲೇ 15 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಇನ್ನು ರಾಜಸ್ಥಾನದಲ್ಲಿ 18, ಕೇರಳದಲ್ಲಿ 15, ಗುಜರಾತ್ ನಲ್ಲಿ 14, ಉತ್ತರ ಪ್ರದೇಶದಲ್ಲಿ 2 ಮತ್ತು ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ಗಢದಲ್ಲಿ ತಲಾ ಒಂದೊಂದು ಪ್ರಕರಣಗಳ ಪತ್ತೆಯಾಗಿದೆ. ಒಟ್ಟು ಈವರೆಗೂ 12 ರಾಜ್ಯಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಮತ್ತಷ್ಟು ರಾಜ್ಯಗಳಲ್ಲಿ ಸೋಂಕು ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ.