Select Your Language

Notifications

webdunia
webdunia
webdunia
webdunia

ವಿಭಿನ್ನ ಗುಣದ 35 ಬೆಳೆ ತಳಿಗಳನ್ನು ಬಿಡುಗಡೆ ಮಾಡಿದ ಮೋದಿ

ವಿಭಿನ್ನ ಗುಣದ 35 ಬೆಳೆ ತಳಿಗಳನ್ನು ಬಿಡುಗಡೆ ಮಾಡಿದ ಮೋದಿ
ನವದೆಹಲಿ , ಮಂಗಳವಾರ, 28 ಸೆಪ್ಟಂಬರ್ 2021 (14:55 IST)
ನವದೆಹಲಿ : ತಾಪಮಾನ ಬದಲಾವಣೆ ಮತ್ತು ಪೌಷ್ಟಿಕಾಂಶ ಕೊರತೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿಭಿನ್ನ ಗುಣಲಕ್ಷಣಗಳುಳ್ಳ 35 ಬೆಳೆಗಳ ತಳಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಇವನ್ನು ಅಭಿವೃದ್ಧಿಪಡಿಸಿದೆ. ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿ.ವಿಗಳಲ್ಲಿ ನಡೆದ ವಿಡಿಯೊ ಕಾನ್ಫರೆನ್ಸ್ನಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು.
ಪ್ರಧಾನಮಂತ್ರಿ ಕಚೇರಿಯ ಹೇಳಿಕೆಯನುಸಾರ, ಅಭಿವೃದ್ಧಿ ಪಡಿಸಲಾಗಿರುವ ನೂತನ ತಳಿಗಳು ತಾಪಮಾನ ಬದಲಾವಣೆ ಸವಾಲು ಎದುರಿಸಲು ಪೂರಕವಾದ ಸ್ಥಿತಿಸ್ಥಾಪಕತ್ವ, ಅತ್ಯಧಿಕ ಪೌಷ್ಟಿಕಾಂಶವನ್ನು ಒಳಗೊಂಡಿದೆ.
ಬರಗಾಲದ ಸಹಿಷ್ಣು ಮಾದರಿಯ ಕಡಲೆ, ಬೀಜ ನಿರೋಧಕ ಗುಣವುಳ್ಳ ತೊಗರಿ, ತ್ವರಿತವಾಗಿ ಫಸಲು ನೀಡುವ ಸೋಯಾಬೀನ್, ರೋಗನಿರೋಧಕ ಸಾಮರ್ಥ್ಯದ ಭತ್ತ, ಜೈವಿಕ ಬಲವರ್ಧಿತವಾದ ಗೋಧಿ, ಜೋಳ, ತೊಗರಿ, ರಾಗಿ, ನವಣೆ ಅಕ್ಕಿ, ಹುರುಳಿ ಬೆಳೆಗಳ ತಳಿಗಳು ಇವುಗಳಲ್ಲಿ ಸೇರಿವೆ.
ವಿಶೇಷ ಗುಣಗಳಿರುವ ಈ ತಳಿಗಳು ಪೌಷ್ಟಿಕಾಂಶ ನಿರೋಧಕ ಶಕ್ತಿಯನ್ನೂ ಹೊಂದಿವೆ. ಕೆಲವು ತಳಿಗಳಲ್ಲಿರುವ ಅಂಶಗಳು ಮನುಷ್ಯ, ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದವು. ಇದು ಆ ಕೊರತೆ ನೀಗಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ದೇಶದಲ್ಲಿ ಶೇ 86ರಷ್ಟು ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಈ ಸಮೂಹದ ಕೃಷಿಕರ ಆದಾಯವನ್ನು ಹೆಚ್ಚಿಸುವುದು ಪ್ರಧಾನಮಂತ್ರಿಗಳ ಆದ್ಯತೆಯಾಗಿದೆ ಎಂದು ಪ್ರತಿಪಾದಿಸಿದರು.
ಈ ವರ್ಗದ ರೈತರ ಆದಾಯ ದುಪ್ಪಟ್ಟುಗೊಳಿಸಲು ಹಾಗೂ ಭಾರತವನ್ನು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸಲು ಈ ಮೂಲಕ ಕೃಷಿಕರಿಗೆ ಹಲವು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಯ್ಪುರದಲ್ಲಿ ರಾಷ್ಟ್ರೀಯ ಜೈವಿಕ ಒತ್ತಡ ಸಹಿಷ್ಣು ಕೇಂದ್ರ (ಎನ್ಐಬಿಎಸ್ಟಿ) ಸ್ಥಾಪನೆಗಾಗಿ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದರು.
ಕೇಂದ್ರ ಮೀನುಗಾರಿಕೆ, ಪಶು ಸಂಗೋಪನಾ ಸಚಿವ ಪರಶೋತ್ತಮ್ ರೂಪಾಲಾ, ಕೃಷಿ ಖಾತೆ ರಾಜ್ಯ ಸಚಿವರಾದ ಕೈಲಾಶ್ ಚೌಧರಿ, ಶೋಭಾ ಕರಂದ್ಲಾಜೆ, ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು