Select Your Language

Notifications

webdunia
webdunia
webdunia
webdunia

ಜೀವಾವಧಿ ಶಿಕ್ಷೆ ಮರುಪರಿಶೀಲನೆ ಅಗತ್ಯವಿಲ್ಲ: ಸುಪ್ರೀಂ

ಜೀವಾವಧಿ ಶಿಕ್ಷೆ ಮರುಪರಿಶೀಲನೆ ಅಗತ್ಯವಿಲ್ಲ: ಸುಪ್ರೀಂ
ನವದೆಹಲಿ , ಗುರುವಾರ, 16 ಸೆಪ್ಟಂಬರ್ 2021 (07:22 IST)
ಹೊಸದಿಲ್ಲಿ,ಸೆ.16 : ಜೀವಾವಧಿ ಶಿಕ್ಷೆಯು ಆಜೀವ ಕಠಿಣ ಜೈಲುಶಿಕ್ಷೆಯಾಗಿದೆ ಮತ್ತು ಕಾನೂನಿನ ಈ ಅಂಶದ ಮರುಪರಿಶೀಲನೆಯ ಅಗತ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಪ್ರತ್ಯೇಕ ಪ್ರಕರಣಗಳಲ್ಲಿ ಕೊಲೆ ಆರೋಪದಲ್ಲಿ ದೋಷನಿರ್ಣಯಗೊಂಡಿರುವ ಮಹಮ್ಮದ್ ಅಲ್ಫಾಝ್ ಅಲಿ ಮತ್ತು ರಾಕೇಶ ಕುಮಾರ್ ಎನ್ನುವವರು ಸಲ್ಲಿಸಿದ್ದ ಎರಡು ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಮಂಗಳವಾರ ತೀರ್ಪನ್ನು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಈ ವಿಷಯವನ್ನು ಸ್ಪಷ್ಟಪಡಿಸಿದೆ. ಇಬ್ಬರೂ ಅರ್ಜಿದಾರರಿಗೆ ತಮ್ಮ ಮಡದಿಯರ ಹತ್ಯೆಗಾಗಿ ಕಠಿಣ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು.
ಜೀವಾವಧಿ ಶಿಕ್ಷೆಯನ್ನು ಆಜೀವ ಕಠಿಣ ಜೈಲುಶಿಕ್ಷೆಗೆ ಸಮನಾಗಿಸುವಂತಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
2018ರಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವಾಗ ಕಠಿಣ ಜೈಲುಶಿಕ್ಷೆಯನ್ನು ಸೂಚಿಸುವ ಔಚಿತ್ಯಕ್ಕೆ ಸಂಬಂಧಿಸಿದಂತೆ ಮಾತ್ರ ಅವರ ಮೇಲ್ಮನವಿಗಳ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿತ್ತು.
ಕಠಿಣ ಜೈಲುಶಿಕ್ಷೆಯು ಕಠಿಣ ಶ್ರಮವನ್ನು ಒಳಗೊಂಡಿರುತ್ತದೆ ಎಂದು ಐಪಿಸಿಯ ಕಲಂ 53 ಹೇಳುತ್ತದೆಯಾದರೂ ಅದು ಏನು ಎನ್ನುವುದನ್ನು ಅದು ವ್ಯಾಖ್ಯಾನಿಸಿಲ್ಲ. ಸಾದಾ ಜೈಲುಶಿಕ್ಷೆಯಲ್ಲಿ ಕೈದಿಗಳಿಗೆ ಅವರ ಕೋರಿಕೆಯ ಮೇರೆಗೆ ಮಾತ್ರ ಮತ್ತು ಅವರ ದೈಹಿಕ ಕ್ಷಮತೆಗೆ ಒಳಪಟ್ಟು ಕೆಲಸ ಮಾಡಲು ಅನುಮತಿ ನೀಡಲಾಗುತ್ತದೆ.
1983ರಲ್ಲಿ ನಾಯಬ್ಸಿಂಗ್ ವಿರುದ್ಧ ಪಂಜಾಬ್ ಸರಕಾರ ಪ್ರಕರಣದಲ್ಲಿಯೂ ಜೀವಾವಧಿ ಶಿಕ್ಷೆ ಎಂದರೆ ಕಠಿಣ ಜೈಲುಶಿಕ್ಷೆ ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು.
ನಂತರದ ಮೂರು ತೀರ್ಪುಗಳು ಸಹ ಇದೇ ನಿಲುವನ್ನು ಧೃಢೀಕರಿಸಿವೆ ಎಂದು ಮಂಗಳವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು,ನಾಯಬ್ ಸಿಂಗ್ ಪ್ರಕರಣದ ತೀರ್ಪು ಸಹ ಗೋಪಾಲ ವಿನಾಯಕ ಗೋಡ್ಸೆ ವಿರುದ್ಧ ಮಹಾರಾಷ್ಟ್ರ ಸರಕಾರ ಸೇರಿದಂತೆ ಹಿಂದಿನ ಎರಡು ತೀರ್ಪುಗಳನ್ನು ಆಧರಿಸಿತ್ತು ಎಂದು ತಿಳಿಸಿದೆ.
ಗೋಪಾಲ ಗೋಡ್ಸೆ ನಾಥುರಾಮ ಗೋಡ್ಸೆಯ ಕಿರಿಯ ಸೋದರನಾಗಿದ್ದು,ಮಹಾತ್ಮಾ ಗಾಂಧಿಯವರ ಹತ್ಯೆಗಾಗಿ ಇಬ್ಬರೂ ತಪ್ಪಿತಸ್ಥರೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟಿದ್ದರು. ನಾಥುರಾಮನನ್ನು 1949ರಲ್ಲಿ ಗಲ್ಲಿಗೇರಿಸಲಾಗಿದ್ದರೆ,ಗೋಪಾಲಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕೊರಿಯಾ: ಎರಡು ಖಂಡಾಂತರ ಕ್ಷಿಪಣಿ ಉಡಾವಣೆ