ನವದೆಹಲಿ : ದೇಶದಲ್ಲಿ ಕೋವಿಡ್ ಕೇಸ್ಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಶಾಲಾ-ಕಾಲೇಜುಗಳನ್ನು ಪುನಃ ಮುಚ್ಚುವಂತೆ ಆದೇಶಿಸಿವೆ.
ತಮಿಳುನಾಡಲ್ಲಿ ಜ.31ರವರೆಗೂ 1ರಿಂದ 12ನೇ ತರಗತಿ ಸೇರಿದಂತೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ನಡೆಸದಂತೆ ಆದೇಶಿಸಲಾಗಿದೆ. ಜ. 19ರಿಂದ ಆರಂಭವಾಗಬೇಕಿದ್ದ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಸಹ ಕೋವಿಡ್ ಮುಂದೂಡಿದೆ.
ಇನ್ನು ಉತ್ತರಪ್ರದೇಶದಲ್ಲಿ ಜ.23 ರವರೆಗೆ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಆದರೆ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಸರ್ಕಾರ ತಿಳಿಸಿದೆ. ಇನ್ನು ತೆಲಂಗಾಣದಲ್ಲಿ ಸಹ ಮೆಡಿಕಲ್ ಕಾಲೇಜುಗಳನ್ನು ಹೊರತುಪಡಿಸಿ ಇನ್ನೆಲ್ಲಾ ಶಾಲಾ-ಕಾಲೇಜುಗಳನ್ನು ಜ.30 ರವರೆಗೆ ಮುಚ್ಚುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆದೇಶಿಸಿದ್ದಾರೆ.