ಗಾಂಧಿ ಜಯಂತಿಯ ಪ್ರಯುಕ್ತ ಕೊಚ್ಚಿ ಮೆಟ್ರೋ ರೈಲು ನಿಗಮ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ 50 ಪ್ರತಿಶತ ವಿನಾಯ್ತಿ ನೀಡಿದೆ.ಕೊಚ್ಚಿ 1 ಕಾರ್ಡ್ ಹೊಂದಿರುವವರಿಗೆ ಸಹ ಕ್ಯಾಶ್ಬ್ಯಾಕ್ ಸೌಕರ್ಯ ನೀಡಲಾಗಿದೆ. ಕೆಎಂಆರ್ಎಲ್ ದಿವ್ಯಾಂಗ ಪ್ರಯಾಣಿಕರಿಗೆ ಉಚಿತ ಪ್ರಯಾಣ ಹಾಗೂ ದಿವ್ಯಾಂಗ ವ್ಯಕ್ತಿಯ ಜೊತೆ ಬರುವವರಿಗೆ ಇಂದಿನಿಂದ 50 ಪ್ರತಿಶತ ದರ ವಿನಾಯ್ತಿ ನೀಡುತ್ತಿದೆ.
ಈ ನಡುವೆ ಕೊಚ್ಚಿ ಮೆಟ್ರೋ ಅಧಿಕಾರಿಗಳು ಮೆಟ್ರೋ ರೈಲು ಸಂಚಾರದ ವಾರಾಂತ್ಯದ ಪಟ್ಟಿಯನ್ನು ಪರಿಷ್ಕರಿಸಿದ್ದಾರೆ. ಲಾಕ್ ಡೌನ್ ಬಳಿಕ ವಾರದ ದಿನಗಳಂತೆಯೇ ವಾರಾಂತ್ಯದಲ್ಲೂ ಜನಸಂದಣಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ರೈಲು ಸಂಚಾರದ ವೇಳಾಪಟ್ಟಿ ಬದಲಿಸಲು ನಿರ್ಧರಿಸಲಾಗಿದೆ ಎಂದು ಏಒಖಐ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಶನಿವಾರದಂದು ಮೆಟ್ರೋ ರೈಲುಗಳ ನಡುವಿನ ಅಂತರವನ್ನು 8 ನಿಮಿಷ 15 ಸೆಕೆಂಡ್ಗೆ ನಿಗದಿ ಮಾಡಲಾಗಿದೆ. ಜನರ ಓಡಾಟ ಕಡಿಮೆ ಇರುವ ಸಮಯದಲ್ಲಿ ಈ ಅಂತರವು 10 ನಿಮಿಷ ಆಗಿರಲಿದೆ. ಭಾನುವಾರದಂದು ಈ ಹಿಂದೆ ಮೆಟ್ರೋ ರೈಲು ಸಂಚಾರದ ನಡುವಿನ ಅಂತರವನ್ನು 15 ನಿಮಿಷಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಈಗ ಈ ಅವಧಿಯನ್ನು 10 ನಿಮಿಷಕ್ಕೆ ಬದಲಾಯಿಸಲಾಗಿದೆ.