ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಬಂಗಲೆಯಲ್ಲಿ ಬಾಂಬ್ ಬೆದರಿಕೆ ಬಂದಿದೆ. ಹಾಗೆಯೇ ಮುಂಬೈನ ಮೂರು ಪ್ರಮುಖ ರೈಲು ನಿಲ್ದಾಣಕ್ಕೂ ಈಗ ಬಾಂಬ್ ಭೀತಿ ಎದುರಾಗಿದೆ. ಅಮಿತಾಭ್ ಬಚ್ಚನ್ ಮನೆಯಲ್ಲಿ ಬಾಲಿವುಡ್ ಸ್ಟಾರ್ಗಳಾದ ಅಭಿಷೇಕ್ ಬಚ್ಚನ್, ಜಯಾ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಮೊಮ್ಮಗಳು ಆರಾಧ್ಯ ಬಚ್ಚನ್ ವಾಸಿಸುತ್ತಿದ್ದಾರೆ. ಇದೀಗ ಬಾಂಬ್ ಬೆದರಿಕೆಯಿಂದ ಆತಂಕದ ಪರಿಸ್ಥಿತಿ ಎದುರಾಗಿದೆ.
ಅನಾಮಧೇಯ ಕರೆ ಮಾಡಿದವರು ಮುಂಬೈನ ಮೂರು ಪ್ರಮುಖ ರೈಲ್ವೆ ನಿಲ್ದಾಣಗಳು ಮತ್ತು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಂಗಲೆಗಳಲ್ಲಿ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಬೆದರಿಸಿದ್ದಾರೆ. ಮುಂಬೈ ಪೊಲೀಸ್ ಸಿಬ್ಬಂದಿ ಈ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು ಶುಕ್ರವಾರ ರಾತ್ರಿ ಮುಂಬೈ ಪೋಲಿಸ್ನ ಮುಖ್ಯ ಕಂಟ್ರೋಲ್ ರೂಂಗೆ ಕರೆ ಬಂದಿದ್ದು, ಕರೆ ಮಾಡಿದವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ), ಬೈಕುಲ್ಲಾ, ದಾದರ್ ರೈಲ್ವೇ ನಿಲ್ದಾಣಗಳಲ್ಲಿ ಮತ್ತು ನಟ ಅಮಿತಾಬ್ ಮನೆಯಲ್ಲಿ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಹೇಳಿದ್ದಾರೆ. ಮುಂಬೈನ ಹೆಚ್ಚಿನ ಸೆಲೆಬ್ರಿಟಿಗಳಿರುವ ಜುಹುದಲ್ಲಿ ಅಮಿತಾಭ್ ಬಚ್ಚನ್ ಅವರ ಬಂಗಲೆ ಇದೆ.
ಕರೆ ಬಂದ ನಂತರ, ಸರ್ಕಾರಿ ರೈಲ್ವೆ ಪೋಲಿಸ್, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಜೊತೆಗೆ ಬಾಂಬ್ ಪತ್ತೆ ಮತ್ತು ನಿರ್ವಹಣೆ ದಳ, ಶ್ವಾನದಳ ಮತ್ತು ಸ್ಥಳೀಯ ಪೋಲಿಸ್ ಸಿಬ್ಬಂದಿ ಈ ಸ್ಥಳಗಳಿಗೆ ಧಾವಿಸಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೂ ಈ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ನಂತರ ಮುಂಬೈ ಪೊಲೀಸರು ಹೇಳಿಕೆಯಲ್ಲಿ ಇದು ಹುಸಿ ಕರೆ ಎಂದು ದೃಢಪಡಿಸಿದ್ದಾರೆ.
ನಿನ್ನೆ ರಾತ್ರಿ ಪೊಲೀಸ್ ಕಂಟ್ರೋಲ್ ರೂಂಗೆ ಒಂದು ಫೋನ್ ಕರೆ ಬಂದಿತು. ಮುಂಬೈನ ನಾಲ್ಕು ಸ್ಥಳಗಳಲ್ಲಿ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಹಾಕಲಾಯಿತು. ಪೋಲಿಸ್, ಬಾಂಬ್ ಸ್ಕ್ವಾಡ್ ಮತ್ತು ಉಖP ತಂಡವು ಶೋಧ ನಡೆಸಿತು. ತನಿಖೆಯಲ್ಲಿ, ಇದು ಹುಸಿ ಕರೆ ಎಂದು ಕಂಡುಬಂದಿದೆ. ಕರೆ ಮಾಡಿದವರು ಮತ್ತು ಆತನ ಸ್ಥಳವನ್ನು ಪತ್ತೆ ಮಾಡುವಲ್ಲಿ ಪೊಲೀಸ್ ತಂಡ ಕೆಲಸ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.