Publish Date: Wed, 02 May 2018 (15:50 IST)
Updated Date: Wed, 02 May 2018 (15:51 IST)
ಸಚಿವ ಎಂ.ಬಿ.ಪಾಟೀಲ್ ಒಬ್ಬ ಮೋಸಗಾರ ಮಾತ್ರವಲ್ಲದೆ ಬಂಜಾರಾ ಸಮಾಜವನ್ನ ವ್ಯವಸ್ಥಿತವಾಗಿ ತುಳಿಯುತ್ತಿದ್ದಾರೆ ಎಂದು ಬಂಜಾರಾ ಕ್ರಾಂತಿ ದಳದ ಅಧ್ಯಕ್ಷ ಶಂಕರ ಚವ್ಹಾಣ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಸಚಿವ ಎಂ.ಬಿ.ಪಾಟೀಲ್ ಹೊಂದಾಣಿಕೆ ರಾಜಕೀಯ ಮಾಡುತ್ತಾ ಕಾಂಗ್ರೆಸ್ ಮಾತ್ರವಲ್ಲದೇ ಇನ್ನಿತರ ಪ್ರಮುಖ ಪಕ್ಷಗಳಲ್ಲಿಯೂ ನಾನೇ ಸುಪ್ರೀಂ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದರು.
ಬಂಜಾರ ಸಮಾಜದವರ ಮತ ಪಡೆದು, ಬಳಸಿಕೊಂಡು ಗೆದ್ದು ಸಚಿವರಾಗುವತನಕ ಅಧಿಕಾರ ಅನುಭವಿಸಿ ಇದೀಗ ನಮ್ಮ ಸಮಾಜದವರನ್ನು ರಾಜಕೀಯವಾಗಿ ನಿರ್ನಾಮ ಮಾಡುತ್ತಾ, ಅಧಿಕಾರಿಗಳನ್ನೂ ಸೇವೆ ಸಲ್ಲಿಸದಂತೆ ತಡೆದು ಬಂಜಾರ ಸಮಾಜಕ್ಕೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಬಂಜಾರ ಸಮಾಜದ ಜನತೆ ಅವರನ್ನ ವಿರೋಧಿಸಿ ಬಿಜೆಪಿಯನ್ನ ಬೆಂಬಲಿಸುವ ಮೂಲಕ ಅಧಿಕಾರದ ದರ್ಪದಲ್ಲಿರುವ ಎಂ.ಬಿ.ಪಾಟೀಲರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.