Publish Date: Tue, 13 Sep 2022 (16:17 IST)
Updated Date: Tue, 13 Sep 2022 (16:18 IST)
ಲಂಡನ್ : ರಾಣಿ ಎಲಿಜಬೆತ್ 2 ಬರೆದ ರಹಸ್ಯ ಪತ್ರವನ್ನು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ರಾಣಿ ವಿಕ್ಟೋರಿಯಾ ಅರಮನೆಯಲ್ಲಿ ಮರೆಮಾಚಲಾಗಿದ್ದು, ಇದನ್ನು 60 ವರ್ಷಗಳ ಬಳಿಕ ತೆರೆಯಲು ರಾಣಿ ಸೂಚಿಸಿದ್ದರು.
ಎಲಿಜಬೆತ್ ರಾಣಿಯು ಈ ಪತ್ರವನ್ನು 1986ರ ನವೆಂಬರ್ನಲ್ಲಿ ಸಿಡ್ನಿಯ ಜನರನ್ನು ಉದ್ದೇಶಿಸಿ ಬರೆದಿದ್ದರು. ಆದರೆ ಈ ಪತ್ರವನ್ನು 2085ರಲ್ಲಿ ಮಾತ್ರ ತೆರೆಯಬಹುದು ಎಂದು ರಾಣಿಯು ಷರತ್ತನ್ನು ವಿಧಿಸಿದ್ದರು.
ಇದರಿಂದಾಗಿ ಎಲಿಜಬೆತ್ ರಾಣಿಯ ಮುತ್ತಜ್ಜಿ ವಿಕ್ಟೋರಿಯಾ ರಾಣಿಯ ವಜ್ರ ಮಹೋತ್ಸವವನ್ನು ಆಚರಿಸಲು 1898ರಲ್ಲಿ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ಮರೆ ಮಾಚಿ ಇಡಲಾಗಿದೆ.
ಆಸ್ಟ್ರೇಲಿಯಾದ ಸ್ಥಳೀಯ ನ್ಯೂಸ್ ಸಂಸ್ಥೆಯ ವರದಿ ಪ್ರಕಾರ, ಅಚ್ಚರಿಯ ವಿಷಯವೆಂದರೆ ಆ ಪತ್ರದಲ್ಲಿ ಏನಿದೆ ಎನ್ನುವುದರ ಬಗ್ಗೆ ಈವರೆಗೂ ರಾಣಿಯ ವೈಯಕ್ತಿಕ ಸಿಬ್ಬಂದಿ ತಿಳಿದಿಲ್ಲ. ಅಷ್ಟೇ ಅಲ್ಲದೇ ಈ ಪತ್ರವು ಯಾರ ಕೈಗೂ ಸಿಗಬಾರದೆಂದು ನಿರ್ಬಂಧಿತ ಪ್ರದೇಶದಲ್ಲಿರುವ ಗಾಜಿನ ಪೆಟ್ಟಿಗೆಯಲ್ಲಿ ಭದ್ರವಾಗಿ ಇಡಲಾಗಿದೆ.