ಉಡುಪಿ : ದೇಶಕ್ಕೂ ಕಾಲಿಟ್ಟು ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಜ್ವರದ ಭೀತಿ ಮಾಸುವ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಅಪರೂಪದ ಇಲಿ ಜ್ವರ ಪತ್ತೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಜಿಲ್ಲೆಯ 85 ಮಂದಿಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲಿ ಜ್ವರ ಕಾಣಿಸಿಕೊಂಡಿದ್ದು, ಇದು ಇಲಿಗಳ ಮಲಮೂತ್ರದಿಂದ ಹರಡುವ ಸೋಂಕಾಗಿದೆ.
ಮಲೆನಾಡಿನ ತಪ್ಪಲಿನಲ್ಲಿ ಹೆಚ್ಚು ಜನಕ್ಕೆ ಇಲಿಜ್ವರ ಕಾಣಿಸಿಕೊಂಡಿದೆ. ಕುಂದಾಪುರ 40, ಉಡುಪಿ 32, ಕಾರ್ಕಳ 13 ಪ್ರಕರಣ ವರದಿಯಾಗಿದೆ. ಮಳೆಗಾಲದಲ್ಲಿ ಈ ಜ್ವರ ಕಾಣಿಸಿಕೊಳ್ಳಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಏನಿದು ಇಲಿ ಜ್ವರ?
ವೈಜ್ಞಾನಿಕವಾಗಿ ಲೆಪ್ಟೊಸ್ಪೈರೋಸಿಸ್ ಎಂದು ಕರೆಸಿಕೊಳ್ಳುವ ಈ ಇಲಿ ಜ್ವರ ಬರುವುದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ. ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಲ್ಲಿ ಇದೂ ಒಂದು.
ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿ ಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ.