Publish Date: Sun, 03 Jul 2022 (18:13 IST)
Updated Date: Sun, 03 Jul 2022 (18:16 IST)
ಉಡುಪಿಯ ಖ್ಯಾತ ಮರವಂತೆ ಬೀಚ್ ನಲ್ಲಿ ದುರಂತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರು ಸಮುದ್ರಕ್ಕೆ ಉರುಳಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಮತ್ತೋರ್ವ ನಾಪತ್ತೆಯಾಗಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಸಮುದ್ರಕ್ಕೆ ಕಾರೊಂದು ಉರುಳಿ ಬಿದ್ದು, ಓರ್ವ ಮೃತಪಟ್ಟಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿರುವ ಘಟನೆ ನಡೆದಿದೆ. ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿ ಮೇಲಿನಿಂದ ಕಳೆದ ರಾತ್ರಿ ಕಾರು ಸಮುದ್ರಕ್ಕೆ ಬಿದ್ದಿದೆ.
ಮೂಲಗಳ ಪ್ರಕಾರ ದುರಂತಕ್ಕೀಡಾದ ಕಾರಿನಲ್ಲಿ ನಾಲ್ವರಿದ್ದರು ಎಂದು ತಿಳಿದುಬಂದಿದೆ. ಈ ಪೈಕಿ ಓರ್ವ ಕಾರಿನೊಳಗೆ ಸಾವನ್ನಪ್ಪಿದ್ದು, ಮತ್ತೊಬ್ಬರು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಮುಳುಗಿರುವವರಿಗಾಗಿ ಅಗ್ನಿಶಾಮಕದಳ, ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.