ಬೆಂಗಳೂರು: ಇತ್ತೀಚೆಗೆ ಜೊತೆ ಜೊತೆಯಲಿ ಧಾರವಾಹಿ ವಿವಾದವಾದಾಗ ನಿರ್ಮಾಪಕರು ನಟ ಅನಿರುದ್ಧ್ ಜತ್ಕಾರ್ ಕ್ಯಾರಾವಾನ್ ಬೇಕೇ ಬೇಕು ಎಂದು ಗಲಾಟೆ ಮಾಡಿದ್ದರು ಎಂದು ಆರೋಪಿಸಿದ್ದರು.
ಆದರೆ ಅಸಲಿಗೆ ನಮ್ಮ ಕಿರುತೆರೆ ಧಾರವಾಹಿ ಸೆಟ್ ಗಳಲ್ಲಿ ಪ್ರತಿನಿತ್ಯವೂ ಕ್ಯಾರಾವಾನ್ ವ್ಯವಸ್ಥೆ ಇರುತ್ತದೆಯೇ? ಕಿರುತೆರೆಯ ಅನುಭವಿಗಳ ಪ್ರಕಾರ ಕನ್ನಡದ ಧಾರವಾಹಿ ಸೆಟ್ ಗಳಲ್ಲಿ ಕ್ಯಾರಾ ವ್ಯಾನ್ ವ್ಯವಸ್ಥೆ ಇರುವುದೇ ಅಪರೂಪ.
ಪುರುಷ ಕಲಾವಿದರು ಹೆಚ್ಚಾಗಿ ಬೀದಿ ಬದಿಯಲ್ಲೋ, ಎಲ್ಲಾದರೂ ಗೋಡೆ ಬದಿಯಲ್ಲೋ ಹೋಗಿ ಬಟ್ಟೆ ಚೇಂಜ್ ಮಾಡಿಕೊಂಡು ಬರಬೇಕಾಗುತ್ತದೆ. ಮಹಿಳಾ ಕಲಾವಿದರಿಗೆ ಶೂಟಿಂಗ್ ಪಕ್ಕದಲ್ಲಿ ಯಾವುದಾದರೂ ಮನೆ ಬುಕ್ ಮಾಡಿಕೊಂಡಿರುತ್ತಾರೆ. ಅಲ್ಲಿಯೇ ಬಟ್ಟೆ ಬದಲಾಯಿಸಲು ಹಾಗೂ ಇನ್ನಿತರ ಕೆಲಸಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ.
ಸದ್ಯಕ್ಕೆ ರಿಯಾಲಿಟಿ ಶೋಗಳಲ್ಲಿ ಮಾತ್ರ ಕ್ಯಾರಾವ್ಯಾನ್ ವ್ಯವಸ್ಥೆಯಿದೆ. ಒಂದು ವಾಹಿನಿಯಲ್ಲಿ ಸುಮಾರು ಏಳೆಂಟು ಧಾರವಾಹಿಗಳಿರುತ್ತವೆ. ಅವೆಲ್ಲದಕ್ಕೂ ಕ್ಯಾರಾ ವ್ಯಾನ್ ಒದಗಿಸುವ ವ್ಯವಸ್ಥೆ ನಮ್ಮಲ್ಲಿ ಇನ್ನೂ ಬಂದಿಲ್ಲ. ಒಂದು ವೇಳೆ ಅಪರಿಚಿತ ಸ್ಥಳದಲ್ಲಿ ಹೊರಾಂಗಣ ಚಿತ್ರೀಕರಣ ಮಾಡುವಾಗ ಹತ್ತಿರ ಬೇರೆ ಮನೆ ಸಿಗುವ ಅವಕಾಶವೂ ಇಲ್ಲದೇ ಹೋದರೆ ಮಾತ್ರ ಅಪರೂಪಕ್ಕೆ ಕ್ಯಾರಾವ್ಯಾನ್ ವ್ಯವಸ್ಥೆ ಮಾಡಲಾಗುತ್ತಿದೆ.