ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯಿಂದ ಕೈ ಬಿಟ್ಟಿರುವುದಕ್ಕೆ ಅನಿರುದ್ಧ್ ಜತ್ಕಾರ್ ಪರವಾಗಿ ಅವರ ಅಭಿಮಾನಿಗಳು ಚಾನೆಲ್ ಮತ್ತು ನಿರ್ಮಾಪಕರ ವಿರುದ್ಧ ಧ್ವನಿಯೆತ್ತಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅಭಿಮಾನಿಗಳು ಅನಿರುದ್ಧ್ ಅವರನ್ನು ಹೊರಹಾಕಿರುವುದರ ಹಿಂದೆ ದುರುದ್ದೇಶವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಆದ ಘಟನೆಗಳನ್ನು 700 ಸಂಚಿಕೆ ಆದ ಮೇಲೆ ಹೇಳಿದ್ದು ಸರಿಯಲ್ಲ. ನಟರು ಮೊದಲೇ ಸೀನ್ ಪೇಪರ್ ಕೊಡಿ ಎಂದರೆ ತಪ್ಪಾ? ಬಹಿಷ್ಕಾರ ಹಾಕಿರುವುದರಲ್ಲಿ ದುರುದ್ದೇಶ ಕಾಣುತ್ತಿದೆ. ಇದು ಬೇರೆ ಕಲಾವಿದರಿಗೂ ವಾರ್ನಿಂಗ್ ಇದ್ದಂತೆ. ಅನಿರುದ್ಧ್ ಸರ್ ಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಒಕ್ಕೊರಲಿನಿಂದ ಕರೆಕೊಟ್ಟಿದ್ದಾರೆ.
ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಆರೂರು ಜಗದೀಶ್ ಟಿಆರ್ ಪಿ ಕಡಿಮೆಯಾಗಲು ಅನಿರುದ್ಧ್ ಅವರೇ ಕಾರಣ, ಕತೆಯಲ್ಲಿ ಬದಲಾವಣೆಯಾಗಲೂ ಅವರೇ ಕಾರಣ ಎಂದೆಲ್ಲಾ ಆರೋಪ ಮಾಡಿದ್ದರು. ಆದರೆ ಕೆಲವು ಸಮಯದ ಮೊದಲು ಆರೂರು ಜಗದೀಶ್ ಟಿಆರ್ ಪಿ ನಮಗೆ ಮುಖ್ಯವಲ್ಲ, ಅನಿರುದ್ಧ್ ಪಾತ್ರವನ್ನು ಯಾವುದೇ ಕಾರಣಕ್ಕೂ ನಕಾರಾತ್ಮಕವಾಗಿ ಮಾಡಲ್ಲ ಎಂದಿದ್ದ ಅಡಿಯೋ ಈಗ ವೈರಲ್ ಆಗಿದೆ. ಹೀಗಾಗಿ ಇದೆಲ್ಲಾ ಪೂರ್ವ ಯೋಜಿತ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.