ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರಂತ್ಯಕ್ಕೆ ಕಿಚ್ಚ ಸುದೀಪ್ ಬರುತ್ತಿಲ್ಲ. ಅವರ ಬದಲು ನಟಿ, ಬಿಗ್ ಬಾಸ್ ಕನ್ನಡ ಸೀಸನ್ ನ ಏಕೈಕ ಮಹಿಳಾ ವಿನ್ನರ್ ಶ್ರುತಿ ಕೃಷ್ಣ ಬಂದಿದ್ದಾರೆ.
ಕಿಚ್ಚ ಸುದೀಪ್ ಕೆಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಬ್ಯುಸಿಯಾಗಿರುವುದರಿಂದ ಗೈರಾಗಿದ್ದಾರೆ. ಅವರ ಬದಲು ನ್ಯಾಯಾಧೀಶೆಯಾಗಿ ಶ್ರುತಿ ಕಾರ್ಯನಿರ್ವಹಿಸಿದ್ದು, ಸ್ಪರ್ಧಿಗಳ ಬಗ್ಗೆ ಆರೋಪ, ಪ್ರತ್ಯಾರೋಪಗಳ ನ್ಯಾಯ ತೀರ್ಮಾನ ಮಾಢುವ ಕೆಲಸ ಮಾಡಲಿದ್ದಾರೆ.
ಶ್ರುತಿ 2016 ರಲ್ಲಿ ನಡೆದಿದ್ದ ಬಿಗ್ ಬಾಸ್ ಕನ್ನಡ ಶೋನ ವಿನ್ನರ್. ಇದುವರೆಗೆ ನಡೆದ ಎಲ್ಲಾ 10 ಬಿಗ್ ಬಾಸ್ ಗಳಲ್ಲಿ ಮಹಿಳೆಯೊಬ್ಬರು ಬಿಗ್ ಬಾಸ್ ಗೆದ್ದಿದ್ದಾರೆ ಎಂದರೆ ಅದು ಶ್ರುತಿ ಮಾತ್ರ.
ಶ್ರುತಿ ಈಗ ಬಿಗ್ ಬಾಸ್ ಮನೆಯೊಳಗೆ ನ್ಯಾಯ ತೀರ್ಮಾನ ಕೊಡಲು ಪ್ರವೇಶ ಮಾಡಿದ್ದಾರೆ. ನ್ಯಾಯಪೀಠದಲ್ಲಿ ಕುಳಿತು ಸ್ಪರ್ಧಿಗಳ ಬಗ್ಗೆ ದೂರು-ದುಮ್ಮಾನಗಳನ್ನು ಆಲಿಸಲಿದ್ದಾರೆ. ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಮನೆಯ ಸದಸ್ಯರಾದ ಸಂಗೀತಾ, ನಮ್ರತಾ ವಿನಯ್ ವಿರುದ್ಧ ನಮ್ಮೆದುರಿಗೆ ಕಟುವಾಗಿರ್ತಾರೆ, ಕಿಚ್ಚ ಸುದೀಪ್ ಎದುರಿಗೆ ಅತಿಯಾಗಿ ವಿನಯವಂತಿಕೆ ತೋರಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.
ಇದಕ್ಕೆ ಕಟಕಟೆಯಲ್ಲಿ ನಿಂತು ಪ್ರತಿಕ್ರಿಯಿಸಿರುವ ವಿನಯ್, ನಾನು ಇವರ ಎದುರಿಗೆಲ್ಲಾ ನಾಟಕ ಮಾಡಬೇಕಾಗಿಲ್ಲ ಎಂದಿದ್ದಾರೆ. ಅವರು ಏರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ಶ್ರುತಿ, ನನ್ನ ಮುಂದೆಯೇ ಏರು ಧ್ವನಿಯಲ್ಲಿ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.