Publish Date: Wed, 22 Nov 2023 (10:05 IST)
Updated Date: Wed, 22 Nov 2023 (10:15 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಸಾಕಷ್ಟು ವಿವಾದ, ರಗಳೆಗಳಿಂದಲೇ ಸುದ್ದಿಯಾಗುತ್ತಿದೆ. ಅದರಲ್ಲೂ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ನಡುವಿನ ಸ್ನೇಹ-ಕಲಹ ಭಾರೀ ಸುದ್ದಿಯಾಗುತ್ತಿದೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳಾಗಿ ಮಾಡಿ ಸವಾಲು ನೀಡುವ ಮತ್ತು ನೀಡಿದ ಸವಾಲನ್ನು ಪೂರ್ತಿ ಮಾಡುವ ಟಾಸ್ಕ್ ನೀಡಲಾಗಿದೆ. ಅದರಂತೆ ನಿನ್ನೆ ಮನೆಯಲ್ಲಿ ಸಂಗೀತಾ ಎದುರಾಳಿ ತಂಡದ ಕಾರ್ತಿಕ್ ಮತ್ತು ಸಂತೋ಼ಷ್ ಗೆ ತಲೆ ಕೂದಲು ಬೋಳಿಸಲು ಸವಾಲು ನೀಡಿದ್ದರು. ಅದರಂತೆ ಇಬ್ಬರೂ ಕೂದಲು ತೆಗೆದಿದ್ದಾರೆ.
ಆದರೆ ಈ ಅಮಾನವೀಯ ಸವಾಲಿಗೆ ಸಂಗೀತ ಮತ್ತು ತಂಡಕ್ಕೆ ಛೀಮಾರಿ ಕೂಡಾ ವ್ಯಕ್ತವಾಗಿದೆ. ಟಾಸ್ಕ್ ಮುಗಿದ ಮೇಲೆ ಸಂಗೀತಾಗೆ ತಾನು ಮಾಡಿದ ಕೆಲಸದ ಬಗ್ಗೆ ಪಶ್ಚಾತ್ತಾಪವಾಯಿತೋ, ಅಪರಾಧಿ ಮನೋಭಾವ ಕಾಡಿತೋ ಏನೋ.. ಕಾರ್ತಿಕ್ ಮತ್ತು ಸಂಗೀತಾ ನಡುವೆ ಈ ಬಗ್ಗೆ ಚರ್ಚೆಯಾಗಿದೆ. ಈ ಸಂದರ್ಭದಲ್ಲಿ ಮತ್ತೆ ಇಬ್ಬರೂ ಜಗಳವಾಡಿಕೊಂಡಿದ್ದಾರೆ. ಯಾಕೋ ನಾನು ಬೇರೆ ಯಾರೋ ಆಗುತ್ತಿದ್ದೇನೆ ಎನಿಸುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.
ಕೊನೆಯಲ್ಲಿ ಸಂಗೀತಾ ನಾನು ಆಟ ಆಡುವುದಿಲ್ಲ ಎಂದಿದ್ದಾರೆ. ನಂತರದಲ್ಲಿ ಬಿಗ್ ಬಾಸ್ ಮನೆಯ ಮುಖ್ಯದ್ವಾರ ತೆರೆದಿದೆ. ಈ ಪ್ರೋಮೋ ನೋಡಿ ಸಂಗೀತಾರನ್ನು ಮನೆಯಿಂದ ಹೊರಹಾಕಲಾಗುತ್ತಿದೆಯಾ ಎಂಬ ಅನುಮಾನ ವೀಕ್ಷಕರಿಗೆ ಕಾಡಿದೆ. ಆದರೆ ಅಸಲಿಗೆ ಮುಖ್ಯದ್ವಾರ ಓಪನ್ ಆಗಿದ್ದೇಕೆ ಎಂದು ಇಂದಿನ ಎಪಿಸೋಡ್ ನಲ್ಲೇ ಗೊತ್ತಾಗಬೇಕಿದೆ.