ಮುಂಬೈ: ನವದೆಹಲಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಿಷಭ್ ಪಂತ್ ಒಂದೂವರೆ ವರ್ಷದ ಬಳಿಕ ಕೊನೆಗೂ ಭಾರತ ತಂಡಕ್ಕೆ ವಾಪಸಾಗಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಗಾಗಿ ನ್ಯೂಯಾರ್ಕ್‌ಗೆ ತಂಡದೊಂದಿಗೆ ತೆರಳಿರುವ ಅವರು ಅಭ್ಯಾಸದಲ್ಲಿ ತೊಡಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಎಡಗೈ ಬ್ಯಾಟರ್ ರಿಷಭ್ ಪಂತ್ ಮತ್ತೆ ಪುನರಾಗಮನ ಮಾಡುವ ಹೊಸ್ತಿಲಲ್ಲಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಅವರು ವಿಶ್ವಕಪ್ ಟೂರ್ನಿಯಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ಸಮವಸ್ತ್ರ ಧರಿಸಿ ಆಡುವುದೇ ವಿಭಿನ್ನ ಅನುಭವ. ಈ ಕ್ಷಣವನ್ನು ತುಂಬಾ ಮಿಸ್ ಮಾಡಿಕೊಂಡಿದ್ದೆ. ಈಗ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿದೆ. ಮತ್ತೆ ತಂಡವನ್ನು ಸೇರಿಕೊಂಡಿರುವುದು ಅಪೂರ್ವ ಅನುಭವ ಎಂದು ಬಿಸಿಸಿಐ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಪಂತ್ ಹೇಳಿದ್ದಾರೆ.
ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದ ಅತಿಥ್ಯದಲ್ಲಿ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಜೂನ್ 5ರಂದು ಐರ್ಲೆಂಡ್ ಸವಾಲನ್ನು ಎದುರಿಸಲಿದೆ. ಇದಕ್ಕೂ ಮೊದಲು ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲಿದೆ. ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.