ಬರ್ಮಿಂಗ್ ಹ್ಯಾಮ್: ಅಪಾರ ನಿರೀಕ್ಷೆಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು, ಅದಕ್ಕೆ ತಕ್ಕಂತೆ ಪ್ರದರ್ಶನ ನೀಡುವುದು ಸುಲಭದ ಮಾತಲ್ಲ. ಒಬ್ಬ ಚಾಂಪಿಯನ್ ಆಟಗಾರ್ತಿಗೆ ಮಾತ್ರ ಇದು ಸಾಧ‍್ಯ. ಅದನ್ನು ಇಂದು ಪಿ.ವಿ. ಸಿಂಧು ನಿರೂಪಿಸಿದರು. ತಾವು ಯಾಕೆ ಭಾರತದ ಬ್ಯಾಡ್ಮಿಟಂನ್ ಕ್ವೀನ್ ಎಂದು ಕಾಮನ್ ವೆಲ್ತ್ ಗೇಮ್ಸ್ ನ ಫೈನಲ್ ಪಂದ್ಯದಲ್ಲಿ ಸಾಬೀತುಪಡಿಸಿದರು.
ಇದೀಗ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಷೆಲ್ ಲೀ ವಿರುದ್ಧ 2-0 ಅಂತರದಿಂದ ಗೆದ್ದ ಸಿಂಧು ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಮೊದಲ ಸೆಟ್ ನಲ್ಲಿ ದ್ವಿತೀಯಾರ್ಧದಿಂದ ಸಿಂಧು ತಮ್ಮ ಅನುಭವ, ಚಾಣಕ್ಯತನ ಮೆರೆಯಲು ಪ್ರಾರಂಭಿಸಿದ್ದರು. ಹಾಗಿದ್ದರೂ ನೆಟ್ ಶಾಟ್ ಗಳಲ್ಲಿ ಎಂದಿನಂತೆ ಅಂಕ ಬಿಟ್ಟುಕೊಟ್ಟರು. ಕೆಲವೇ ಕೆಲವು ತಪ್ಪುಗಳು ಬಿಟ್ಟರೆ ಇಂದಿನ ಪಂದ್ಯದಲ್ಲಿ ಸಿಂಧು ಆಟ ಮನಮೋಹಕವಾಗಿತ್ತು. ಕೊನೆಗೂ ನಿರೀಕ್ಷೆಯಂತೇ ಭಾರತಕ್ಕೆ ಚಿನ್ನ ತಂದುಕೊಡುವಲ್ಲಿ ಸಿಂಧು ಯಶಸ್ವಿಯಾದರು.