ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ನಿನ್ನೆ ಭಾರತಕ್ಕೆ ಸುವರ್ಣ ದಿನವಾಗಿತ್ತು. ಒಂದೇ ದಿನ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಭಾರತಕ್ಕೆ ಒಲಿಯಿತು.
ಕುಸ್ತಿಪಟುಗಳು ನಿನ್ನೆ ಭಾರತದ ಕೀರ್ತಿ ಪತಾಕೆ ಏರಿಸಲು ಕಾರಣರಾದರು. ಖ್ಯಾತ ಕುಸ್ತಿಪಟು ಬಜರಂಗ್ ಪೂನಿಯಾ ನಿರೀಕ್ಷೆಯಂತೇ ಫೈನಲ್ ಗೆದ್ದು ಚಿನ್ನ ತಂದುಕೊಟ್ಟರು. ಅವರ ಬೆನ್ನಲ್ಲೇ ಮಹಿಳಾ ತಾರೆ ಸಾಕ್ಷಿ ಮಲಿಕ್, ಪುರುಷರ 86 ಕೆ.ಜಿ. ವಿಭಾಗದಲ್ಲಿ ದೀಪಕ್ ಪೂನಿಯಾ ಸ್ವರ್ಣ ಪದಕ ಗೆದ್ದುಕೊಟ್ಟರು.
ಇನ್ನೊಂದೆಡೆ ಫೈನಲ್ ತಲುಪಿದ್ದ ಅಂಶು ಮಲಿಕ್ ಫೈನಲ್ ನಲ್ಲಿ ಎಡವಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. 125 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಮೋಹಿತ್ ಗ್ರೆವಾಲ್ ಕಂಚು ಗೆದ್ದರೆ ಮಹಿಳೆಯರ 68 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ದಿವ್ಯಾ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ಭಾರತ ಪದಕ ಪಟ್ಟಿಯಲ್ಲಿ 9 ಚಿನ್ನ, 8 ಬೆಳ್ಳಿ, 9 ಕಂಚಿನ ಪದಕದೊಂದಿಗೆ ಐದನೇ ಸ್ಥಾನಕ್ಕೆ ಏರಿಕೆ ಕಂಡಿತು.