ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವುದು ಸಾಮಾನ್ಯದ ಮಾತಲ್ಲ. ಅದೂ ದೇಶಕ್ಕೆ ಚಿನ್ನದ ಪದಕ ಗೆದ್ದುತಂದುಕೊಡುವುದು ಯಾವುದೇ ಆಟಗಾರನಿಗಾದರೂ ಹೆಮ್ಮೆಯ ಕ್ಷಣ.
ನಿನ್ನೆಯ ಕುಸ್ತಿ ಪಂದ್ಯದಲ್ಲಿ ಬಜರಂಗ್ ಪೂನಿಯಾ ಫೈನಲ್ ಪಂದ್ಯಕ್ಕೆ ಮೊದಲೇ ಅವರೇ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಾರೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಅದಕ್ಕೆ ತಕ್ಕಂತೆ ಕುಸ್ತಿ ಪಂದ್ಯಗಳನ್ನು ವೀಕ್ಷಿಸಲು ಭಾರತದ ಹೆಚ್ಚು ಸಮರ್ಥಕರು ಮೈದಾನದಲ್ಲಿ ತ್ರಿವರ್ಣ ಧ್ವಜ ಹಿಡಿದು ಕುಳಿತಿದ್ದರು. ಬಜರಂಗ್ ಫೈನಲ್ ಗೆಲ್ಲುತ್ತಿದ್ದಂತೇ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತ್ತು. ಜೊತೆಗೆ ಬಜರಂಗ್ ಕೂಡಾ ತ್ರಿವರ್ಣ ಧ್ವಜ ಹಿಡಿದು ಇಡೀ ಅಂಕಣಕ್ಕೆ ಸುತ್ತು ಹಾಕಿ ಅಲ್ಲಿದ್ದ ಎಲ್ಲಾ ಅಭಿಮಾನಿಗಳಿಗೆ ಹಸ್ತಾಲಾಘವ ನೀಡಿ, ಮಕ್ಕಳಿಗೆ ಸೆಲ್ಫೀಗೆ ಪೋಸ್ ಕೊಟ್ಟು ಅಭಿನಂದನೆ ಸ್ವೀಕರಿಸಿದರು.
ಇನ್ನೊಂದೆಡೆ ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದ ಸಾಕ್ಷಿ ಮಲಿಕ್ ಸಂಭ್ರಮವಂತೂ ಹೇಳತೀರದು. ಪಂದ್ಯ ಗೆಲ್ಲುತ್ತಿದ್ದಂತೇ ಭಾರತದ ಧ್ವಜ ಹಿಡಿದು ಕುಣಿದಾಡಿಬಿಟ್ಟರು. ಜೊತೆಗೆ ಪ್ರೇಕ್ಷಕರ ಅಭಿನಂದನೆ ಸ್ವೀಕರಿಸಿದರು. ಇನ್ನು, ಪ್ರಶಸ್ತಿ ಸಮಾರಂಭದಲ್ಲಿ ಚಿನ್ನದ ಪದಕ ಕೊರಳಿಗೆ ಹಾಕುತ್ತಿದ್ದಂತೇ ಸಾಕ್ಷಿ ಖುಷಿಯಿಂದ ಕಣ್ಣೀರು ಹಾಕಿದ್ದರು.