ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಕುಸ್ತಿಪಟು ವಿನೇಶ್ ಫೋಗಟ್ ಸರ್ಕಾರೀ ಉದ್ಯೋಗವನ್ನೇ ಬಿಟ್ಟಿದ್ದಾರೆ. ಇದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೊನ್ನೆಯಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದ ವಿನೇಶ್ ಫೋಗಟ್ ಹಾಗೂ ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರುವುದು ಖಚಿತಪಡಿಸಿದ್ದರು. ಇಂದು ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇದಕ್ಕೆ ಮೊದಲು ಅವರು ತಮಗೆ ಕ್ರೀಡಾ ಕೋಟಾದಲ್ಲಿ ಬಂದಿದ್ದ ಕೈ ತುಂಬಾ ಸಂಬಳ ಬರುವ ಸರ್ಕಾರೀ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ವಿನೇಶ್, ವೈಯಕ್ತಿಕ ಕಾರಣಗಳಿಂದ ಭಾರತೀಯ ರೈಲ್ವೇ ನನಗೆ ನೀಡಿರುವ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಅವಕಾಶ ನೀಡಿದ ಭಾರತೀಯ ರೈಲ್ವೇಗೆ ಧನ್ಯವಾದಗಳು ಎಂದಿದ್ದಾರೆ.
ಈ ಬಾರಿ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಇದಕ್ಕೆ ಮೊದಲು ವಿನೇಶ್ ತಮ್ಮ ಸರ್ಕಾರೀ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕುಸ್ತಿ ಫೆಡರೇಷನ್ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದ ವಿನೇಶ್ ಈಗ ರಾಜಕೀಯವಾಗಿಯೇ ಬಿಜೆಪಿಗೆ ಸೆಡ್ಡು ಹೊಡೆಯಲಿದ್ದಾರೆ.