ನವದೆಹಲಿ: ಕುಸ್ತಿ ಫೆಡರೇಷನ್ ನಲ್ಲಿ ಬಿಜೆಪಿ ನಾಯಕ, ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಹೋರಾಟದಲ್ಲಿ ಕೇಂದ್ರದ ವಿರುದ್ಧ ಕಿಡಿ ಕಾರುತ್ತಲೇ ಇದ್ದ ಕುಸ್ತಿಪಟು ವಿನೇಶ್ ಫೋಗಟ್ ಈಗ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರಾ ಎಂಬ ಅನುಮಾನ ಮೂಡಿದೆ.
ವಿನೇಶ್ ಫೋಗಟ್ ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸಮಿಫೈನಲ್ ಗೆ ಗೆದ್ದಿದ್ದರೂ ತೂಕ ಹೆಚ್ಚಳದಿಂದಾಗಿ ಫೈನಲ್ ಗೆ ಅನರ್ಹರಾಗಿದ್ದರು. ಈ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು. ಪ್ರಧಾನಿ ಮೋದಿ ತಕ್ಷಣವೇ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥೆ ಪಿಟಿ ಉಷಾಗೆ ಕರೆ ಮಾಡಿ ಸಾಧ್ಯವಿರುವ ಎಲ್ಲಾ ದಾರಿಗಳನ್ನು ನೋಡಿ, ವಿನೇಶ್ ಗೆ ಫೈನಲ್ ಆಡಲು ಸಾಧ್ಯವಾಗುತ್ತದೆಯೇ ನೋಡಿ ಎಂದು ಕರೆ ಮಾಡಿ ಆಗ್ರಹಿಸಿದ್ದರು. ಆದರೆ ಕೊನೆಗೂ ಅದು ಸಾಧ್ಯವಾಗಲೇ ಇಲ್ಲ.
ಈ ಮೊದಲಿನಿಂದಲೂ ವಿನೇಶ್ ಕುಸ್ತಿ ಫೇಡರೇಷನ್ ವಿಚಾರದಲ್ಲಿ ಕೇಂದ್ರದ ಜೊತೆ ಗುದ್ದಾಡುತ್ತಲೇ ಇದ್ದಾರೆ. ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹರ್ಯಾಣದ ಕಾಂಗ್ರೆಸ್ ನಾಯಕ ಭೂಪಿಂದರ್ ಹೂಡ ಅವರನ್ನು ಭೇಟಿಯಾಗಿದ್ದಾರೆ.
ಇದರೊಂದಿಗೆ ಈಗ ಕೇಂದ್ರದ ವಿರುದ್ಧ ರಾಜಕೀಯವಾಗಿಯೂ ಹೋರಾಡಲು ತಯಾರಿ ನಡೆಸಿದ್ದಾರೆ. ಒಲಿಂಪಿಕ್ಸ್ ನಲ್ಲಿ ಅನರ್ಹಗೊಂಡ ಬಳಿಕ ವಿನೇಶ್ ಕುಸ್ತಿಗೆ ವಿದಾಯ ಘೋಷಿಸಿದ್ದರು. ಹೀಗಾಗಿ ಈಗ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇದುವರೆಗೆ ಅಧಿಕೃತ ಪ್ರಕಟಣೆ ಬಂದಿಲ್ಲ.