ನವದೆಹಲಿ: ಒಲಿಂಪಿಕ್ಸ್ ಫೆಡರೇಷನ್ ವಿರುದ್ಧ ಹೋರಾಟ ನಡೆಸುತ್ತಲೇ ಬಂದ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುವುದು ನಿಶ್ಚಿತವಾಗಿದೆ. ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಇಬ್ಬರೂ ಭೇಟಿಯಾಗಿ ಚುನಾವಣೆ ಟಿಕೆಟ್ ಫಿಕ್ಸ್ ಮಾಡಿಕೊಂಡಿದ್ದಾರೆ.
ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಗೆ ಅನರ್ಹರಾದಾಗಲೂ ಅವರ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧ್ವನಿಯೆತ್ತಿ ಪ್ರಧಾನಿ ಮೋದಿಯನ್ನು ಕೆಣಕಿದ್ದರು.
ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಹೋರಾಟ ನಡೆಸುತ್ತಿದ್ದಾಗಲೇ ಈ ಕುಸ್ತಿಪಟುಗಳಿಗೆ ರಾಹುಲ್ ಬೆಂಬಲ ಸೂಚಿಸಿದ್ದರು. ಇದೀಗ ಎಲ್ಲರೂ ಊಹಿಸಿದಂತೇ ಇಬ್ಬರೂ ಕುಸ್ತಿಪಟುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಖಚಿತವಾಗಿದೆ.
ಮುಂಬರುವ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧೆ ನಡೆಸಲಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಲು ಇಂದು ರಾಹುಲ್ ಗಾಂಧಿಯನ್ನು ಇಬ್ಬರೂ ಕುಸ್ತಿಪಟುಗಳು ಭೇಟಿಯಾಗಿದ್ದರು. ಹರ್ಯಾಣದ ಜುಲಾನಾ ಕ್ಷೇತ್ರದ ಟಿಕೆಟ್ ಗಾಗಿ ವಿನೇಶ್ ಬೇಡಿಕೆಯಿಟ್ಟಿದ್ದಾರೆ. ಇದೀಗ ಕಾಂಗ್ರೆಸ್ ಚುನಾವಣಾ ಸಮಿತಿಯಿಂದ ಹಸಿರು ನಿಶಾನೆ ಸಿಕ್ಕ ಬಳಿಕ ಇಬ್ಬರನ್ನೂ ಅಭ್ಯರ್ಥಿಗಳೆಂದು ಘೋಷಣೆ ಮಾಡಲಾಗುತ್ತದೆ.