ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸತತ ಎರಡು ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ.
ಕೋಲ್ಕತ್ತಾದ ಇತಿಹಾಸ ಪ್ರಸಿದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ಅಂತಿಮ ಕದನ ನಡೆಯಲಿದ್ದು, ರೋಹಿತ್ ಶರ್ಮಾ ಪಡೆ ಕ್ಲೀನ್ ಸ್ವಿಪ್ ನತ್ತ ಚಿತ್ತ ನೆಟ್ಟಿದೆ. ಟಿ20 ವಿಶ್ವಕಪ್ನಿಂದ ಹೊರಬಿದ್ದ ಆಘಾತ ಮರೆಮಾಚಲು ಈ ಸರಣಿ ವೈಟ್ವಾಶ್ ಭಾರತಕ್ಕೆ ಕೊಂಚ ನೆಮ್ಮದಿ ತರಬಹುದು. ಇದರ ನಡುವೆ ಸರಣಿಯ ಅಂತಿಮ ಪಂದ್ಯವನ್ನಾದರೂ ಗೆದ್ದು ಮುಖಭಂಗ ತಪ್ಪಿಸಿಕೊಳ್ಳುವ ಪ್ರಯತ್ನ ನ್ಯೂಜಿಲೆಂಡ್‌ನದ್ದು. ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ಅಧಿಕಾರಯುತವಾಗಿಯೇ ಕಿವೀಸ್ ಪಡೆಯನ್ನು ಮಣಿಸಿದೆ. ನ್ಯೂಜಿಲೆಂಡ್ ಆರಂಭದಲ್ಲಿ ಅಬ್ಬರಿಸಿದರೂ ಡೆತ್ ಓವರ್‌ಗಳಲ್ಲಿ ದಿಢೀರ್ ಕುಸಿತ ಕಂಡು ಹಿನ್ನಡೆ ಅನುಭವಿಸಿದೆ. ಭಾರತ ಈ ತಪ್ಪನ್ನು ಮಾಡದೆ ಅದಾಗಲೇ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿದೆ.
ರೋಹಿತ್ ಪಡೆಗೆ ಇದೊಂದು ಔಪಚಾರಿಕ ಪಂದ್ಯವಾದರೂ ಗೆಲುವು ಮಹತ್ವದ್ದಾಗಿದೆ. ಯಾಕಂದ್ರೆ ಇದು ರೋಹಿತ್ ಶರ್ಮಾ ಅವರಿಗೆ ನಾಯಕನಾಗಿ ಮೊದಲ ಸರಣಿ. ಜೊತೆಗೆ ಕೋಚ್ ರಾಹುಲ್ ದ್ರಾವಿಡ್ಗೂ ಇದು ಮೊದಲ ಸರಣಿ. ಹೀಗಾಗಿ ಕ್ಲೀನ್ ಸ್ವಿಪ್ ಮಾಡಿದರೆ ವಿಶೇಷ ಸಾಧನೆಯಾಗಲಿದೆ. ಕಳೆದ 2ನೇ ಟಿ20 ಪಂದ್ಯ ಮುಗಿದ ಬಳಿಕ ರೋಹಿತ್ 3ನೇ ಟಿ20 ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುವ ಸೂಚನೆ ನೀಡಿದ್ದರು. ಅದರಂತೆ ಪ್ರಮುಖವಾಗಿ ನಾಲ್ಕು ಬದಲಾವಣೆ ನಿರೀಕ್ಷಿಸಲಾಗಿದೆ.
ಹೌದು, ಟೀಮ್ ಇಂಡಿಯಾ ಇಂದಿನ ಪಂದ್ಯದ ಮೂಲಕ ತನ್ನ ಬೆಂಚ್ ಸ್ಟ್ರೆಂಥ್ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆಯು ಇದೆ. ಅನುಭವಿಗಳಿಗೆ ವಿಶ್ರಾಂತಿ ನೀಡಿ ಅವಕಾಶಕ್ಕಾಗಿ ಕಾಯುತ್ತಿರುವ ಆಟಗಾರರನ್ನು ಕಣಕ್ಕಿಳಿಸಬಹುದು. ಪ್ರಮುಖವಾಗಿ ಸತತವಾಗಿ ಕ್ರಿಕೆಟ್ ಆಡುತ್ತಿರುವ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ರವಿಚಂದ್ರನ್ ಅಶ್ವಿನ್ಗೆ ವಿಶ್ರಾಂತಿ ನೀಡುವ ಸಂಭವವಿದೆ. ಹೀಗಾದಲ್ಲಿ ಓಪನರ್ ಆಗಿ ರೋಹಿತ್ ಶರ್ಮಾ ಜೊತೆ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.