ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ಬಗ್ಗೆ ಹೊಂದಿರುವ ಉತ್ಸಾಹದ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬೆಟ್ವೆ ಇನ್ಸೈಡರ್ಗೆ ಬರೆದ ಲೇಖನದಲ್ಲಿ ಪೀಟರ್ಸನ್ ಅವರು ಕೊಹ್ಲಿಯ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
'ನಾನು ಗ್ರಹಿಸಿರುವ ಪ್ರಕಾರ, ವಿರಾಟ್ ಕೊಹ್ಲಿ ತಮಗೆ ಸ್ಫೂರ್ತಿ ನೀಡಿದ ಹೀರೋಗಳ ಹೆಜ್ಜೆಯಲ್ಲಿಯೇ ಮುನ್ನೆಡೆಯುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಸೇರಿದಂತೆ ಟೆಸ್ಟ್ ಕ್ರಿಕೆಟ್ನ ಇತರ ದಂತಕಥೆಗಳನ್ನು ಕೊಹ್ಲಿ ಅನುಸರಿಸುತ್ತಾರೆ' ಎಂದು ಪೀಟರ್ಸನ್ ಅಭಿಪ್ರಾಯ ಪಟ್ಟಿದ್ದಾರೆ.
ಕೊಹ್ಲಿ ಅವರಲ್ಲಿರುವ ಉತ್ಸಾಹ, ತೀವ್ರತೆ ಮತ್ತು ತಂಡವನ್ನು ಒಟ್ಟುಗೂಡಿಸುವ ರೀತಿಯನ್ನು ನಾವು ಗಮನಿಸಬಹುದು. ಅವರು ಈಗಲೂ ಟೆಸ್ಟ್ ಕ್ರಿಕೆಟ್ ಅನ್ನು ತುಂಬಾ ಮುಖ್ಯವೆಂದು ಪರಿಗಣಿಸುತ್ತಾರೆ ಎಂದು ಪೀಟರ್ಸನ್ ಬರೆದುಕೊಂಡಿದ್ದಾರೆ.
'ಕ್ರಿಕೆಟ್ನಲ್ಲಿ ದಂತಕಥೆಯಾಗಬೇಕೆಂದರೆ ಟೆಸ್ಟ್ ಫಾರ್ಮ್ಯಾಟ್ನಲ್ಲಿ ಉತ್ತಮ ಸಾಧನೆ ಮಾಡಬೇಕು. ಇದು ಕೊಹ್ಲಿಗೆ ಅರ್ಥವಾಗಿದೆ. ಅದಕ್ಕಾಗಿಯೇ ಅವರು ಟೆಸ್ಟ್ ಫಾರ್ಮ್ಯಾಟ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಜಗತ್ತಿನ ಶ್ರೇಷ್ಠ ಆಟಗಾರನೊಬ್ಬ ಈ ಬಗ್ಗೆ ಉತ್ಸುಕರಾಗಿರುವುದು ತುಂಬಾ ಒಳ್ಳೆಯದು' ಎಂದು ಪೀಟರ್ಸನ್ ತಿಳಿಸಿದ್ದಾರೆ.
ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ನಲ್ಲಿ ಭಾರತ ತಂಡ 151 ರನ್ಗಳ ಅಮೋಘ ಗೆಲುವು ಸಾಧಿಸಿದೆ. ಲಾರ್ಡ್ಸ್ನಲ್ಲಿ ಭಾರತ ತಂಡಕ್ಕೆ ಇದು ಮೂರನೇ ಗೆಲುವು. 1986 ಹಾಗೂ 2014ರ ಸರಣಿಗಳಲ್ಲಿ ತಂಡಕ್ಕೆ ಗೆಲುವು ಒಲಿದಿತ್ತು.